ಸಿಡ್ನಿ: ಮೊದಲೆರಡು ಪಂದ್ಯ ಗೆದ್ದು ಈಗಾಗಲೆ ಸರಣಿ ವಶಪಡಿಸಿಕೊಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಬುಧವಾರ ಆರಂಭವಾಗಲಿರುವ ಮೂರನೇ ಹಾಗೂ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸುವ ತವಕದಲ್ಲಿದೆ. ಇದರೊಂದಿಗೆ ಡೇವಿಡ್ ವಾರ್ನರ್‌ಗೆ ಗೆಲುವಿನ ಉಡುಗೊರೆ ನೀಡುವ ಹಂಬಲದಲ್ಲಿದೆ.
1995ರ ಬಳಿಕ ಆಸೀಸ್ ನೆಲದಲ್ಲಿ ಟೆಸ್ಟ್ ಪಂದ್ಯ ಜಯಿಸುವಲ್ಲಿ ವಿಲವಾಗಿರುವ ಪಾಕಿಸ್ತಾನ ವೈಟ್‌ವಾಷ್ ಭೀತಿ ಎದುರಿಸುತ್ತಿದೆ. ಮೆಲ್ಬೋರ್ನ್ ಹಾಗೂ ಪರ್ತ್ ಟೆಸ್ಟ್‌ನಲ್ಲಿ ಆಡಿದ ಹನ್ನೊಂದರ ಬಳಗವನ್ನೇ ಆಸೀಸ್ ಉಳಿಸಿಕೊಂಡಿದೆ. ವಿದಾಯ ಟೆಸ್ಟ್‌ಗೆ ಮುನ್ನ ಏಕದಿನಕ್ಕೂ ನಿವೃತ್ತಿ ೋಷಿಸಿರುವ 37 ವರ್ಷದ ವಾರ್ನರ್, ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಬರ ಎದುರಿಸಿದ್ದರು. ಸರಣಿಯ ಮೊದಲ ಪಂದ್ಯದಲ್ಲಿ 164 ರನ್ ಸಿಡಿಸುವ ಮೂಲಕ ವಾರ್ನರ್ ಟೀಕೆಗಳಿಗೆ ದಿಟ್ಟ ಉತ್ತರ ನೀಡಿದ್ದರು. 12 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 111 ಟೆಸ್ಟ್ ಆಡಿರುವ ವಾರ್ನರ್, 26 ಶತಕ, 36 ಅರ್ಧಶತಕ ಸಹಿತ 8,695 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ತ್ರಿಶತಕವೂ ಒಳಗೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 2018ರ ಬಾಲ್ ಟಾಪರಿಂಗ್ ಪ್ರರಣದಲ್ಲಿ ವಾರ್ನರ್ ಭಾಗಿಯಾಗಿದ್ದರು.
ವಾರ್ನರ್ ಬ್ಯಾಗಿ ಗ್ರೀನ್ ಕ್ಯಾಪ್ ಕಳವು
ವಿದಾಯ ಪಂದ್ಯಕ್ಕೂ ಮುನ್ನವೇ ಡೇವಿಡ್ ವಾರ್ನರ್‌ಗೆ ಆಘಾತ ಎದುರಾಗಿದೆ. ‘ಬ್ಯಾಗಿ ಗ್ರೀನ್’ ಎಂದೇ ಜನಪ್ರಿಯವಾಗಿರುವ ಆಸೀಸ್ ತಂಡದ ಟೆಸ್ಟ್ ಕ್ಯಾಪ್ ಕಳುವಾಗಿದೆ ಎಂದು ವಾರ್ನರ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಅಳಲು ತೋಡಿಕೊಂಡಿದ್ದು, ಕ್ಯಾಪ್ ಹಿಂತಿರುಗಿಸುವಂತೆಯೂ ಮನವಿ ಸಲ್ಲಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಮೆಲ್ಬೋರ್ನ್‌ನಿಂದ ಸಿಡ್ನಿಗೆ ಪ್ರಯಾಣಿಸುವಾಗ ಕ್ಯಾಪ್ ಕಾಣೆಯಾಗಿದೆ. ನನ್ನ ಲಗೇಜ್ ಬ್ಯಾಗ್‌ನಿಂದ ಕ್ಯಾಪ್ ಕಾಣೆಯಾದ ಬಳಿಕ ವಿಮಾನಯಾನ ಸಂಸ್ಥೆ ಎಲ್ಲ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದರೂ ಕಳ್ಳತನದ ಯಾವುದೇ ಸುಳಿವು ದೊರೆತಿಲ್ಲ. ಯಾರಾದರೂ ತೆಗೆದಿದ್ದರೆ ದಯವಿಟ್ಟು ಮರಳಿಸಿ, ನಿಮ್ಮ ಮೇಲೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ವಾರ್ನರ್ ತಿಳಿಸಿದ್ದಾರೆ.