ಬೆಂಗಳೂರು: ರನ್-ಸಿಕ್ಸರ್ ಮಳೆಯಿಂದ ಸದ್ದು ಮಾಡುತ್ತಿರುವ ಐಪಿಎಲ್ 17ನೇ ಆವೃತ್ತಿ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ. ಲೀಗ್ ಹಂತದ 70 ಪಂದ್ಯಗಳ ಪೈಕಿ 51 ಪಂದ್ಯಗಳು ಮುಕ್ತಾಯಗೊಂಡಿದ್ದು, ಇನ್ನು 19 ಪಂದ್ಯಗಳು ಮಾತ್ರ ಬಾಕಿ ಇದೆ. ಆದರೆ ಇದುವರೆಗೆ ಯಾವ ತಂಡಕ್ಕೂ ಪ್ಲೇಆಫ್ ಪ್ರವೇಶ ಖಚಿತಗೊಂಡಿಲ್ಲ ಮತ್ತು ಯಾವ ತಂಡವೂ ಅಧಿಕೃತವಾಗಿ ರೇಸ್ನಿಂದ ಹೊರಬಿದ್ದಿಲ್ಲ. ಆದರೆ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ಪ್ಲೇಆಫ್ಗೆ ಪ್ರವೇಶ ಬಹುತೇಕ ಖಾತ್ರಿಪಡಿಸಿಕೊಂಡಿದ್ದರೆ, ಕೊನೇ 2 ಸ್ಥಾನದಲ್ಲಿರುವ ಮುಂಬೈ, ಆರ್ಸಿಬಿ ತಂಡಗಳು ಬಹುತೇಕ ನಿರ್ಗಮನ ಬಾಗಿಲಲ್ಲಿವೆ. ಉಳಿದ 3 ಪ್ಲೇಆಫ್ ಸ್ಥಾನಕ್ಕೆ ಸದ್ಯ ಕೆಕೆಆರ್, ಲಖನೌ, ಸನ್ರೈಸರ್ಸ್, ಸಿಎಸ್ಕೆ ನೆಚ್ಚಿನ ತಂಡಗಳಾಗಿವೆ. ಡೆಲ್ಲಿ, ಗುಜರಾತ್, ಪಂಜಾಬ್ ಮಾಡು ಇಲ್ಲವೆ ಸ್ಥಿತಿಯಲ್ಲಿದ್ದು, 1 ಪಂದ್ಯ ಸೋತರೂ ನಿರ್ಗಮನ ಬಾಗಿಲಿನತ್ತ ಮುಖ ಮಾಡಲಿವೆ. ಪ್ಲೇಆಫ್ ಪ್ರವೇಶ ಖಾತ್ರಿ ಪಡಿಸಿಕೊಳ್ಳಲು ಕನಿಷ್ಠ 9 ಜಯ, ಇತರ ಫಲಿತಾಂಶಗಳ ಅನುಕೂಲದೊಂದಿಗೆ ಬಹುತೇಕ ಸ್ಥಾನ ಖಾತ್ರಿಗಾಗಿ ಕನಿಷ್ಠ 8 ಜಯ ಮತ್ತು ಇತರ ಫಲಿತಾಂಶಗಳ ವರದಾನವನ್ನು ಆಶ್ರಯಿಸಲು ಕನಿಷ್ಠ 7 ಜಯ ಅಗತ್ಯ ಎಂಬ ಆಧಾರದಲ್ಲಿ ಎಲ್ಲ 10 ತಂಡಗಳ ಪ್ಲೇಆಫ್ ಸಾಧ್ಯತೆಯ ಲೆಕ್ಕಾಚಾರ ಹೀಗಿದೆ...
ರಾಜಸ್ಥಾನ ರಾಯಲ್ಸ್
ಸಂಜು ಸ್ಯಾಮ್ಸನ್ ಬಳಗ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಉಳಿದ 4 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಕ್ಕೆ ಅಧಿಕೃತ ಮುದ್ರೆ ಬೀಳಲಿದೆ. 2&3 ಪಂದ್ಯ ಗೆದ್ದರೆ ಅಗ್ರ 2 ತಂಡಗಳ ಪೈಕಿ ಒಂದಾಗಿ ಪ್ಲೇಆಫ್ ಪ್ರವೇಶಿಸುವ ಅವಕಾಶವೂ ರಾಜಸ್ಥಾನದ ಮುಂದಿದೆ.
ಬಾಕಿ ಪಂದ್ಯಗಳು: ಮೇ 7: ಡೆಲ್ಲಿ, ಮೇ 12: ಸಿಎಸ್ಕೆ, ಮೇ 15: ಪಂಜಾಬ್, ಮೇ 19: ಕೆಕೆಆರ್.
ಕೋಲ್ಕತ ನೈಟ್ರೈಡರ್ಸ್
ಉಳಿದ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಪ್ಲೇಆಫ್ ಬಹುತೇಕ ಖಚಿತವಾಗಲಿದ್ದು, 2ರಲ್ಲಿ ಗೆದ್ದರೆ ಅಧಿಕೃತ ಮುದ್ರೆ ಬೀಳಲಿದೆ. ಕೊನೇ 4 ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿರುವ ಮುಂಬೈ ವಿರುದ್ಧ ಇನ್ನೊಂದು ಪಂದ್ಯ ಆಡುವ ಅನುಕೂಲವಿದೆ. ಅಗ್ರ 2 ತಂಡಗಳ ಪೈಕಿ ಒಂದಾಗಿ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆಯುವ ಅವಕಾಶವೂ ಕೆಕೆಆರ್ ತಂಡದ ಮುಂದಿದೆ.
ಬಾಕಿ ಪಂದ್ಯಗಳು: ಮೇ 5: ಲಖನೌ, ಮೇ 11: ಮುಂಬೈ, ಮೇ 13: ಗುಜರಾತ್, ಮೇ 19: ರಾಜಸ್ಥಾನ.
ಲಖನೌ ಸೂಪರ್ಜೈಂಟ್ಸ್
ಆಡಿರುವ 10ರಲ್ಲಿ 6ರಲ್ಲಿ ಗೆದ್ದಿರುವ ಲಖನೌ ತಂಡದ ಪ್ಲೇಆಫ್ ಅವಕಾಶ ವೃದ್ಧಿಸಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್ ಅವಕಾಶವಿರಲಿದೆ. ಆದರೆ ಕೊನೇ 3 ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿರುವುದು ಎಲ್ಎಸ್ಜಿಗೆ ಹಿನ್ನಡೆ ಎನಿಸಿದೆ. ಮುಂಬೈ ವಿರುದ್ಧದ ಕಳೆದ ಪಂದ್ಯದ ಗೆಲುವನ್ನು ಕೊನೇ ಪಂದ್ಯದಲ್ಲೂ ಪುನರಾವರ್ತಿಸುವ ಅವಕಾಶವಿದೆ. ಅದಕ್ಕೆ ಮುನ್ನ 1 ಪಂದ್ಯ ಗೆದ್ದುಕೊಳ್ಳುವ ಜತೆಗೆ ರನ್ರೇಟ್ ಕೂಡ ತುಸು ಚೇತರಿಕೆ ಕಾಣಬೇಕಾಗಿದೆ. ಉಳಿದ 4ರಲ್ಲಿ 3ರಲ್ಲಿ ಸೋತರೆ ಲಖನೌಗೆ ಬಾಗಿಲು ಬಹುತೇಕ ಬಂದ್ ಆಗಲಿದೆ.
ಬಾಕಿ ಪಂದ್ಯಗಳು: ಮೇ 5: ಕೆಕೆಆರ್, ಮೇ 8: ಸನ್ರೈಸರ್ಸ್, ಮೇ 14: ಡೆಲ್ಲಿ, ಮೇ 17: ಮುಂಬೈ.
ಸನ್ರೈಸರ್ಸ್ ಹೈದರಾಬಾದ್
ಮೊದಲ 7ರಲ್ಲಿ 5 ಪಂದ್ಯ ಗೆದ್ದು ಸುಸ್ಥಿತಿಯಲ್ಲಿದ್ದ ಸನ್ರೈಸರ್ಸ್ ನಂತರ ಆರ್ಸಿಬಿ, ಸಿಎಸ್ಕೆ ವಿರುದ್ಧ ಸತತ 2 ಪಂದ್ಯಗಳಲ್ಲಿ ಸೋತು ಸಂಕಷ್ಟಕ್ಕೆ ಸಿಲುಕಿತ್ತು. ರಾಯಲ್ಸ್ ವಿರುದ್ಧದ 1 ರನ್ ಜಯದಿಂದ ಮತ್ತೆ ಪ್ಲೇಆಫ್ ಅವಕಾಶ ವೃದ್ಧಿಸಿಕೊಂಡಿದೆ. ಉಳಿದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್ ಅವಕಾಶವಿರಲಿದೆ. ಈ ಪೈಕಿ ಕೊನೇ 3 ಪಂದ್ಯಗಳನ್ನು ತವರಿನ ಹೈದರಾಬಾದ್ ಸ್ಟೇಡಿಯಂನಲ್ಲೇ ಆಡಲಿರುವುದು ಪ್ಯಾಟ್ ಕಮ್ಮಿನ್ಸ್ ಬಳಗಕ್ಕೆ ಹೆಚ್ಚು ಅನುಕೂಲಕರ ಎನಿಸಿದೆ.
ಬಾಕಿ ಪಂದ್ಯಗಳು: ಮೇ 6: ಮುಂಬೈ, ಮೇ 8: ಲಖನೌ, ಮೇ 16: ಗುಜರಾತ್, ಮೇ 19: ಪಂಜಾಬ್.
ಚೆನ್ನೈ ಸೂಪರ್ಕಿಂಗ್ಸ್
ಸನ್ರೈಸರ್ಸ್ ವಿರುದ್ಧ 78 ರನ್ಗಳಿಂದ ಗೆದ್ದ ಬೆನ್ನಲ್ಲೇ ಪಂಜಾಬ್ ವಿರುದ್ಧ ಸೋತಿದ್ದು ಹಿನ್ನಡೆ ತಂದಿದೆ. ಉಳಿದ 4 ಪಂದ್ಯಗಳಲ್ಲಿ 4ರಲ್ಲೂ ಗೆದ್ದರೆ ಪ್ಲೇಆಫ್ ಖಚಿತ. 3ರಲ್ಲಿ ಗೆದ್ದರೂ ಇತರ ಲೆಕ್ಕಾಚಾರಗಳ ಆಧಾರದಲ್ಲಿ ಅವಕಾಶವಿರಲಿದೆ. ಆದರೆ ಹಾಲಿ ಚಾಂಪಿಯನ್ ತಂಡ ಕೊನೇ 4ರಲ್ಲಿ 1 ಪಂದ್ಯವನ್ನಷ್ಟೇ ತವರಿನಲ್ಲಿ ಆಡಲಿದೆ.
ಬಾಕಿ ಪಂದ್ಯಗಳು: ಮೇ 5: ಪಂಜಾಬ್, ಮೇ 10: ಗುಜರಾತ್, ಮೇ 12: ರಾಜಸ್ಥಾನ, ಮೇ 18: ಆರ್ಸಿಬಿ.
ಡೆಲ್ಲಿ ಕ್ಯಾಪಿಟಲ್ಸ್
ಟೂರ್ನಿಯ ಉಳಿದೆಲ್ಲ ತಂಡಗಳಿಗಿಂತ ಮೊದಲಾಗಿ 11 ಪಂದ್ಯ ಆಡಿರುವ ಡೆಲ್ಲಿಗೆ ಇನ್ನು 3 ಪಂದ್ಯಗಳಷ್ಟೇ ಬಾಕಿ ಇದ್ದು, ಈ ಮೂರರಲ್ಲೂ ಗೆದ್ದರಷ್ಟೇ ಪ್ಲೇಆಫ್ ಆಸೆ ಇಡಬಹುದಾಗಿದೆ. ಉಳಿದ 3ರಲ್ಲಿ 2 ಪಂದ್ಯಗಳನ್ನು ಅಂಕಪಟ್ಟಿಯಲ್ಲಿ ತನಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳ ವಿರುದ್ಧ ಆಡಲಿದೆ. ಅದರಲ್ಲೂ ಅಗ್ರಸ್ಥಾನಿ ರಾಜಸ್ಥಾನ ವಿರುದ್ಧದ ಮುಂದಿನ ಪಂದ್ಯ ಡೆಲ್ಲಿ ತಂಡದ ಭವಿಷ್ಯವನ್ನು ನಿರ್ಧರಿಸಲಿದೆ.
ಬಾಕಿ ಪಂದ್ಯಗಳು: ಮೇ 7: ರಾಜಸ್ಥಾನ, ಮೇ 12: ಆರ್ಸಿಬಿ, ಮೇ 14: ಲಖನೌ.
ಗುಜರಾತ್ ಟೈಟಾನ್ಸ್
ತಾನಾಡಿದ ಮೊದಲ 2 ಆವೃತ್ತಿಗಳಲ್ಲಿ ಚಾಂಪಿಯನ್, ರನ್ನರ್ಅಪ್ ಆಗಿರುವ ಗುಜರಾತ್ ಈ ಬಾರಿ ಶುಭಮಾನ್ ಗಿಲ್ ಸಾರಥ್ಯದಲ್ಲಿ ಅಸ್ಥಿರ ನಿರ್ವಹಣೆ ತೋರಿದ್ದು, ಪ್ಲೇಆಫ್ ಪ್ರವೇಶಿಸಲು ಪರದಾಡುತ್ತಿದೆ. 10ರಲ್ಲಿ 4 ಪಂದ್ಯ ಮಾತ್ರ ಗೆದ್ದಿರುವ ಗುಜರಾತ್, ಕೊನೇ 4 ಪಂದ್ಯದಲ್ಲೂ ಗೆದ್ದರಷ್ಟೇ ಪ್ಲೇಆಫ್ ಆಸೆ ಇಡಬಹುದಾಗಿದೆ. ಕಳಪೆ ರನ್ರೇಟ್ ಕೂಡ ದೊಡ್ಡ ಹಿನ್ನಡೆಯಾಗಿದೆ. ಅಂಕಪಟ್ಟಿಯಲ್ಲಿ ತನಗಿಂತ ಮೇಲಿರುವ 3 ತಂಡಗಳ ವಿರುದ್ಧ ಕೊನೇ 3 ಪಂದ್ಯ ಆಡಲಿರುವುದು ಒತ್ತಡ ಹೆಚ್ಚಿಸಿದೆ.
ಬಾಕಿ ಪಂದ್ಯಗಳು: ಮೇ 4: ಆರ್ಸಿಬಿ, ಮೇ 10: ಸಿಎಸ್ಕೆ, ಮೇ 13: ಕೆಕೆಆರ್, ಮೇ 16: ಸನ್ರೈಸರ್ಸ್.
ಪಂಜಾಬ್ ಕಿಂಗ್ಸ್
ದಿಟ್ಟ ನಿರ್ವಹಣೆಯ ನಡುವೆ ಕೆಲ ಪಂದ್ಯಗಳನ್ನು ಕೊನೇ ಓವರ್ನಲ್ಲಿ ರೋಚಕವಾಗಿ ಸೋತಿರುವುದು ಪಂಜಾಬ್ ಸ್ಥಿತಿ ಬಿಗಡಾಯಿಸಿದೆ. ಉಳಿದ 4 ಪಂದ್ಯಗಳಲ್ಲೂ ಗೆದ್ದರೆ ಪಂಜಾಬ್ಗೆ ಈಗಲೂ ಪ್ಲೇಆ್ ಅವಕಾಶವಿದೆ. ಜತೆಗೆ ರನ್ರೇಟ್ ಕೂಡ ಸುಧಾರಣೆ ಕಾಣಬೇಕಾದ ಅಗತ್ಯವಿದೆ. ರಾಜಸ್ಥಾನ, ಸನ್ರೈಸರ್ಸ್ ವಿರುದ್ಧದ ಕೊನೇ 2 ತವರಿನಿಂದ ಹೊರಗಿನ ಪಂದ್ಯಗಳು ಪಂಜಾಬ್ ಸವಾಲು ಕಠಿಣಗೊಳಿಸಿದೆ.
ಬಾಕಿ ಪಂದ್ಯಗಳು: ಮೇ 5: ಸಿಎಸ್ಕೆ, ಮೇ 9: ಆರ್ಸಿಬಿ, ಮೇ 15: ರಾಜಸ್ಥಾನ, ಮೇ 19: ಸನ್ರೈಸರ್ಸ್.
*ಮುಂಬೈ ಇಂಡಿಯನ್ಸ್
ಟೂರ್ನಿಯ 11 ಪಂದ್ಯಗಳಲ್ಲಿ 8ರಲ್ಲಿ ಸೋತಿದ್ದರೂ, ಗಣಿತಶಾಸ್ತ್ರದ ಪ್ರಕಾರ ಮುಂಬೈ ಇಂಡಿಯನ್ಸ್ ಇನ್ನೂ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ! ಆದರೆ 12 ಅಂಕಗಳೊಂದಿಗೆ ಮುಂಬೈ ಪ್ಲೇಆಫ್ಗೆ ಏರಬೇಕಾದರೆ ಪವಾಡವೇ ನಡೆಯಬೇಕು. ಉಳಿದ 3ರಲ್ಲಿ 2 ಪಂದ್ಯ ತವರಿನಲ್ಲಿ ಆಡುವ ಅನುಕೂಲವಿದ್ದರೂ, 5 ಬಾರಿಯ ಚಾಂಪಿಯನ್ ತಂಡಕ್ಕೆ ಕೊನೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡುವುದು ಒಂದೇ ಸಮಾಧಾನಕರ ಮಾರ್ಗವೆನಿಸಿದೆ.
ಬಾಕಿ ಪಂದ್ಯಗಳು: ಮೇ 6: ಸನ್ರೈಸರ್ಸ್, ಮೇ 11: ಕೆಕೆಆರ್, ಮೇ 17: ಲಖನೌ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ಆರ್ಸಿಬಿ, ಅಂಕಪಟ್ಟಿಯ ಕೊನೇ ಸ್ಥಾನದಿಂದ ಪುಟಿದೆದ್ದು ಅಗ್ರ 4ರಲ್ಲಿ ಸ್ಥಾನ ಸಂಪಾದಿಸುವುದು ಕಾಗದದ ಮೇಲಿನ ಲೆಕ್ಕಾಚಾರದಲ್ಲಿ ಈಗಲೂ ಸಾಧ್ಯವಿದೆ. ಉಳಿದ 4ರಲ್ಲಿ ಗೆದ್ದು 14 ಅಂಕ ಸಂಪಾದಿಸಿದರೂ, ಲೀಗ್ ಹಂತ ಮುಕ್ತಾಯಕ್ಕೆ 3ಕ್ಕಿಂತ ಹೆಚ್ಚಿನ ತಂಡಗಳು 14ಕ್ಕಿಂತ ಅಧಿಕ ಅಂಕ ಕಲೆಹಾಕದಿರಲಿ ಎಂದೂ ಆರ್ಸಿಬಿ ಪ್ರಾರ್ಥಿಸಬೇಕಾಗುತ್ತದೆ. ಅಂದರೆ ರಾಜಸ್ಥಾನ, ಕೆಕೆಆರ್ 10ಕ್ಕಿಂತ ಹೆಚ್ಚಿನ ಪಂದ್ಯ ಗೆಲ್ಲಬೇಕು ಮತ್ತು ಇತರ 7 ತಂಡಗಳಲ್ಲಿ ಒಂದು ತಂಡ ಮಾತ್ರ 7ಕ್ಕಿಂತ ಅಧಿಕ ಪಂದ್ಯ ಗೆಲ್ಲಬೇಕು. ಕೊನೇ 4ರಲ್ಲಿ 3 ಪಂದ್ಯ ತವರಿನಲ್ಲಿ ಆಡುವ ಅನುಕೂಲವಿದ್ದರೂ, ಕಳಪೆ ರನ್ರೇಟ್ ದೊಡ್ಡ ಹಿನ್ನಡೆ ಎನಿಸಿದೆ.
ಬಾಕಿ ಪಂದ್ಯಗಳು: ಮೇ 4: ಗುಜರಾತ್, ಮೇ 9: ಪಂಜಾಬ್, ಮೇ 12: ಡೆಲ್ಲಿ, ಮೇ 18: ಸಿಎಸ್ಕೆ.