ಸಿಂಗಾಪುರ: ಇದುವರೆಗೆ ನಡೆದ ಮೂರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಗಳು ಕ್ರಿಕೆಟ್ ಜನಕರ ಆತಿಥ್ಯದಲ್ಲೇ ನಡೆದಿದ್ದರೆ, ಇದೀಗ ಮುಂದಿನ ಮೂರು ಆವೃತ್ತಿಗಳ ಫೈನಲ್ ಪಂದ್ಯವನ್ನೂ ಇಂಗ್ಲೆಂಡ್ನಲ್ಲೇ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಇದರೊಂದಿಗೆ 2031ರವರೆಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ (ಇಸಿಬಿ) ಆತಿಥ್ಯದಲ್ಲೇ ನಡೆಯುವುದು ಖಚಿತಗೊಂಡಿದೆ.
ಭಾರತ ಮುಂದಿನ 2027ರ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಆತಿಥ್ಯಕ್ಕೆ ಆಸಕ್ತಿ ತೋರಿತ್ತು. ಆದರೆ ಇದುವರೆಗೆ ನಡೆದಿರುವ ಮೂರು ಆವೃತ್ತಿಗಳ ಫೈನಲ್ ಕೂಡ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿರುವುದರಿಂದ ಮುಂದಿನ ಮೂರು ಫೈನಲ್ಗಳನ್ನೂ ಆಂಗ್ಲರ ನೆಲದಲ್ಲೇ ನಡೆಸಲು, ಭಾನುವಾರ ಮುಕ್ತಾಯಗೊಂಡ 4 ದಿನಗಳ ಐಸಿಸಿಯ ವಾರ್ಷಿಕ ಮಹಾಸಭೆಯಲ್ಲಿ ರ್ನಿಣಯ ಕೈಗೊಳ್ಳಲಾಗಿದೆ. ಇದರೊಂದಿಗೆ 2027, 2029 ಮತ್ತು 2031ರ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಆಂಗ್ಲರ ನೆಲದಲ್ಲೇ ನಡೆಯುವುದು ಖಚಿತಗೊಂಡಿದೆ.
ಮೊದಲ 3 ಆವೃತ್ತಿಗಳ ಫೈನಲ್ ಇಂಗ್ಲೆಂಡ್ನ ಸೌಥಾಂಪ್ಟನ್ (2021), ಓವಲ್ (2023) ಮತ್ತು ಲಾರ್ಡ್ಸ್ನಲ್ಲಿ (2025) ನಡೆದಿವೆ. ಈ ಪಂದ್ಯಗಳಲ್ಲಿ ಆತಿಥೇಯ ದೇಶ ಆಡದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಿಯ ಪ್ರೇಕ್ಷಕರು ಹಾಜರಾಗಿದ್ದರು ಮತ್ತು ಸ್ಪರ್ಧಾತ್ಮಕ ಪಿಚ್ ಕೂಡ ನಿರ್ಮಿಸಲಾಗಿತ್ತು.
ಡಬ್ಲ್ಯುಟಿಸಿ ಫೈನಲ್ ಪಂದ್ಯ ಯಾವಾಗಲೂ ಜೂನ್ನಲ್ಲಿ ಆಯೋಜನೆಗೊಳ್ಳುತ್ತದೆ. ಆ ಸಮಯದಲ್ಲಿ ಇತರ ಪ್ರಮುಖ ಟೆಸ್ಟ್ ದೇಶಗಳಲ್ಲಿ ಮಳೆಗಾಲವಾಗಿರುತ್ತದೆ. ಹೀಗಾಗಿ ಡಬ್ಲ್ಯುಟಿಸಿ ಫೈನಲ್ ಆಯೋಜನೆಗೆ ಇಂಗ್ಲೆಂಡ್ನ ವಾತಾವರಣವೇ ಸೂಕ್ತ ಎಂದೂ ಐಸಿಸಿ ಪರಿಗಣಿಸಿದೆ.
ಡಬ್ಲ್ಯುಟಿಸಿ ಫೈನಲ್ ಆತಿಥ್ಯ ಪಡೆದರೆ, ಆಗ ಭಾರತವೂ ಫೈನಲ್ ಗೇರಿದರಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಒಂದು ವೇಳೆ ಭಾರತ ಫೈನಲ್ಗೆ ಅರ್ಹತೆ ಪಡೆದರೆ ಆಗ ಪ್ರೇಕ್ಷಕರ ಕೊರತೆ ಉಂಟಾಗಬಹುದು. ಈ ಕಾರಣಕ್ಕಾಗಿ ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್ ಆತಿಥ್ಯ ನೀಡಲು ಐಸಿಸಿ ನಿರಾಕರಿಸಿದೆ ಎನ್ನಲಾಗಿದೆ.
ಮಹಿಳಾ ಕ್ರಿಕೆಟ್ಗೆ ಬೆಂಬಲ
ತಾಲಿಬಾನ್ ಆಡಳಿತದ ನಂತರ ಸಂಪೂರ್ಣವಾಗಿ ಅಸಡ್ಡೆಗೆ ಒಳಗಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡಕ್ಕೂ ಪ್ರೋತ್ಸಾಹ ನೀಡಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೆಲಿಯಾದ ಸಹಕಾರದೊಂದಿಗೆ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರನ್ವಯ ಆಫ್ಘನ್ ಮಹಿಳಾ ಕ್ರಿಕೆಟಿಗರಿಗೆ ಈ ದೇಶಗಳ ದೇಶೀಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ಲಭಿಸಲಿದೆ. ಜತೆಗೆ ಹಾಲಿ ವರ್ಷದ ಏಕದಿನ ವಿಶ್ವಕಪ್ ಮತ್ತು ಮುಂದಿನ ವರ್ಷದ ಟಿ20 ವಿಶ್ವಕಪ್ ವೇಳೆಯೂ ಒಳಗೊಳ್ಳುವಂಥ ವಿಶೇಷ ಅವಕಾಶಗಳನ್ನು ನೀಡಲಾಗುವುದು.
ಜಂಬಿಯಾ, ಟಿಮೋರ್ಗೆ ಐಸಿಸಿ ಸದಸ್ಯತ್ವ
ಎರಡು ದೇಶಗಳನ್ನು ಐಸಿಸಿ ಸದಸ್ಯರಾಗಿ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಈ ಹಿಂದೆ ಸದಸ್ಯತ್ವ ಹೊಂದಿದ್ದರೂ 2019ರಲ್ಲಿ ಅಮಾನತುಗೊಂಡಿದ್ದ ಜಂಬಿಯಾ ಮತ್ತು ಕೇವಲ 13.8 ಲಕ್ಷ ಜನಸಂಖ್ಯೆ ಹೊಂದಿರುವ ಈಸ್ಟ್ ಟಿಮೋರ್ ದೇಶಕ್ಕೆ ಐಸಿಸಿ ಸದಸ್ಯತ್ವ ನೀಡಲಾಗಿದೆ. ಇದರಿಂದ ಐಸಿಸಿ ಸದಸ್ಯ ದೇಶಗಳ ಸಂಖ್ಯೆ 108ರಿಂದ 110ಕ್ಕೆ ಏರಿಕೆಯಾಗಲಿದೆ. ಜಂಬಿಯಾ ಐಸಿಸಿ ಸದಸ್ಯತ್ವ ಪಡೆದ 22ನೇ ಆಫ್ರಿಕನ್ ದೇಶವಾಗಿದೆ. ಈಸ್ಟ್ ಟಿಮೋರ್ ಪೂರ್ವ ಏಷ್ಯಾ ಪೆಸಿಫಿಕ್ನ 10ನೇ ದೇಶವಾಗಿ ಐಸಿಸಿ ಸದಸ್ಯತ್ವ ಪಡೆದಿದೆ.
ಮುಂದಿನ 9 ಐಸಿಸಿ ಟೂರ್ನಿಗಳ ಆತಿಥೇಯರು
2026ರ ಟಿ20 ವಿಶ್ವಕಪ್: ಭಾರತ, ಶ್ರೀಲಂಕಾ
2027ರ ಡಬ್ಲ್ಯುಟಿಸಿ ಫೈನಲ್: ಇಂಗ್ಲೆಂಡ್
2027ರ ಏಕದಿನ ವಿಶ್ವಕಪ್: ದ. ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ.
2028ರ ಟಿ20 ವಿಶ್ವಕಪ್: ಆಸ್ಟ್ರೆಲಿಯಾ, ನ್ಯೂಜಿಲೆಂಡ್
2029ರ ಡಬ್ಲ್ಯುಟಿಸಿ ಫೈನಲ್: ಇಂಗ್ಲೆಂಡ್
2029ರ ಚಾಂಪಿಯನ್ಸ್ ಟ್ರೋಫಿ: ಭಾರತ
2030ರ ಟಿ20 ವಿಶ್ವಕಪ್: ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್
2031ರ ಡಬ್ಲ್ಯುಟಿಸಿ ಫೈನಲ್: ಇಂಗ್ಲೆಂಡ್
2031ರ ಏಕದಿನ ವಿಶ್ವಕಪ್: ಭಾರತ, ಬಾಂಗ್ಲಾದೇಶ