ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ದಿನಗಣನೆ ಆರಂಭವಾಗಿದ್ದು, ತಂಡಗಳು ತಯಾರಿಯನ್ನು ಆರಂಭಿಸಿವೆ. ಈಗಾಗಲೇ ನ್ಯೂಜಿಲೆಂಡ್ ಸೇರಿದಂತೆ ಕೆಲವು ತಂಡಗಳನ್ನು ಪ್ರಕಟಿಸಲಾಗಿದೆ. ಇನ್ನೂ ಟೂರ್ನಿಯ ವಿಚಾರಕ್ಕೆ ಬರುವುದಾದರೆ 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯೊಂದಕ್ಕೆ ಆತಿಥ್ಯ ವಹಿಸುತ್ತಿದ್ದು, ಚಾಂಪಿಯನ್ಸ್ ಟೂರ್ನಿ ಮುಖಾಂತರ ದೇಶದ ಆರ್ಥಿಕ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎಂಬ ವಿಶ್ವಾಸದಲ್ಲಿ ಪಾಕ್ ಎದುರು ನೋಡುತ್ತಿದೆ.
ಇನ್ನೂ ಟೂರ್ನಿಯ (Champions Trophy) ವಿಚಾರಕ್ಕೆ ಬರುವುದಾದರೆ ಫೆಬ್ರವರಿ 19ರಂದು ಆರಂಭವಾಗಲಿದ್ದು, ಮಾರ್ಚ್ 09ರಂದು ಮುಕ್ತಾಯವಾಗಲಿದ್ದು, ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ)ಆಡಲಿದೆ. ಭದ್ರತೆಯ ಕಾರಣ ನೀಡಿ ಭಾರತ ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ಆತಿಥ್ಯದಲ್ಲಿ ಟೂರ್ನಿ ನಡೆದಾಗ ತಟಸ್ಥ ಸ್ಥಳದಲ್ಲಿ ಆಡುವುದಾಗಿ ಷರತ್ತು ವಿಧಿಸಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿಗೆ ಸೂಚಿಸಿದೆ. ಆದರೆ, ಪಾಕಿಸ್ತಾನದ ಆಟಗಾರನೋರ್ವ ಭಾರತದ ಆತಿಥ್ಯವನ್ನು ಹಾಡಿ ಹೊಗಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟರ್ ಫಖರ್ ಜಮಾನ್ 2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿ ವೇಳೆ ತಮ್ಮ ತಂಡಕ್ಕೆ ಸಿಕ್ಕ ಆತಿಥ್ಯ ಹಾಗೂ ಬೆಂಬಲದ ಬಗ್ಗೆ ಮಾತನಾಡಿದ್ದು, ಸ್ಪೋರ್ಟ್ಸ್ ತಕ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಭಾರತದ ನೆಲದಲ್ಲಿ ಆಡುವುದನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ. ಏಕದಿನ ವಿಶ್ವಕಪ್ ವೇಳೆ ನಾವು ಭಾರತದಲ್ಲಿ ಸಿಕ್ಕ ಆತಿಥ್ಯವನ್ನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ.
ನಾವು ಮೊದಲ ಬಾರಿಗೆ ಹೈದರಾಬಾದ್‌ಗೆ ಹೋದಾಗ ಸ್ಥಳೀಯರು ನಮಗೆ ಆತ್ಮೀಯ ಸ್ವಾಗತವನ್ನು ನೀಡಿದರು. ಇದರಿಂದ ನಮಗೆ ತುಂಬಾ ಸಂತೋಷವಾಯಿತು. ಅದೇ ರೀತಿ ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಭಾರತ ಪಾಕಿಸ್ತಾನಕ್ಕೆ ಬಂದಿದ್ದರೆ ನಾವು ಅವರಿಗೆ ಭವ್ಯವಾದ ಸ್ವಾಗತ ಮತ್ತು ಆತಿಥ್ಯವನ್ನು ನೀಡುತ್ತಿದ್ದೆವು. ಆದರೆ, ನಾವು ದುಬೈನಲ್ಲಿ ಭಾರತದ ವಿರುದ್ಧ ಆಡಲು ಉತ್ಸುಕರಾಗಿದ್ಧೇವೆ ಎಂದು ಪಾಕ್ ಕ್ರಿಕೆಟ್ ತಂಡದ ಬ್ಯಾಟರ್ ಫಖರ್ ಜಮಾನ್ ಸ್ಪೋರ್ಟ್ಸ್ ತಕ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.