ಲಂಡನ್/ನವದೆಹಲಿ: ಕರೊನಾ ಭೀತಿಯಿಂದಾಗಿ ಜಗತ್ತಿನ ಎಲ್ಲ ಕಡೆ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ನಿಂತಿದೆ. ಏಪ್ರಿಲ್ 12 ರಂದು ಆರಂಭಗೊಳ್ಳಬೇಕಿರುವ ಕೌಂಟಿ ಕ್ರಿಕೆಟ್ ಚಾಂಪಿಯನ್ಷಿಪ್ನ ಪೂರ್ವಭಾವಿ ಪಂದ್ಯಗಳನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದೂಡಿದೆ. ಇದರೊಂದಿಗೆ ಕ್ರಿಕೆಟ್ ಜನಕರ ನಾಡಿನಲ್ಲೇ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಂತಾಗಿದೆ. ಈ ತಿಂಗಳು ರದ್ದುಗೊಂಡ ಅಥವಾ ಮುಂದೂಡಲ್ಪಟ್ಟ ಪ್ರಮುಖ ಕ್ರಿಕೆಟ್ ಟೂರ್ನಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಢಾಕಾದಲ್ಲಿ ನಿಗದಿಯಾಗಿದ್ದ ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವಿನ 2 ಪಂದ್ಯಗಳ ಸರಣಿ ಮುಂದೂಡಿಕೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ.
ಮಾಜಿ ಆಟಗಾರರ ರಸ್ತೆ ಸುರಕ್ಷಾ ವಿಶ್ವ ಸರಣಿ ಮೊಟಕು. ಟೂರ್ನಿಯ ಉಳಿದ 7 ಪಂದ್ಯ ಅನಿರ್ದಿಷ್ಟಾವಧಿಗೆ ಮುಂದೂಡಿಕೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದು.
ಐಪಿಎಲ್ ಟೂರ್ನಿ ಏಪ್ರಿಲ್ 15ರವರೆಗೆ ಮುಂದೂಡಿಕೆ.
ಇಂಗ್ಲೆಂಡ್ ತಂಡದ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿ ಮುಂದೂಡಿಕೆ. ಲಂಕಾದಲ್ಲಿ ಅಭ್ಯಾಸ ಪಂದ್ಯವನ್ನು ಅರ್ಧದಲ್ಲೇ ನಿಲ್ಲಿಸಿ ತವರಿಗೆ ಮರಳಿದ ಇಂಗ್ಲೆಂಡ್ ತಂಡ.
ಸಿಡ್ನಿಯ ಖಾಲಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ- ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ. ಬಳಿಕ ಸಂಪೂರ್ಣ ಸರಣಿ ಮುಂದೂಡಿಕೆ.
ವೆಸ್ಟ್ ಇಂಡೀಸ್ ದೇಶೀಯ ಕ್ರಿಕೆಟ್ ಚಟುವಟಿಕೆ ಮಾರ್ಚ್ 16ರಿಂದ 30 ದಿನಗಳ ಕಾಲ ಸ್ಥಗಿತ.
ದೇಶೀಯ ಕ್ರಿಕೆಟ್ ಟೂರ್ನಿಯ ಎಲ್ಲ ವಯೋಮಿತಿ, ಮಹಿಳಾ ಪಂದ್ಯಗಳನ್ನೂ ಮುಂದೂಡಿದ ಬಿಸಿಸಿಐ; ರಣಜಿ ಚಾಂಪಿಯನ್-ಶೇಷ ಭಾರತ ನಡುವಿನ ಇರಾನಿ ಕಪ್ ಪಂದ್ಯ ರದ್ದು.
ಢಾಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿ ರದ್ದು.
ಎಲ್ಲ ದೇಶೀಯ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಳಿಸಿದ ದಕ್ಷಿಣ ಆಫ್ರಿಕಾ.
ಬಾಂಗ್ಲಾದೇಶ ತಂಡದ ಪಾಕಿಸ್ತಾನ ಪ್ರವಾಸ ಅನಿರ್ದಿಷ್ಟಾವಧಿಗೆ ಮುಂದೂಡಿಕೆ.
ನ್ಯೂಜಿಲೆಂಡ್ನ ದೇಶೀಯ ಟೂರ್ನಿ ಪ್ಲಂಕೆಟ್ ಶೀಲ್ಡ್ ಸ್ಥಗಿತ. ವೆಲ್ಲಿಂಗ್ಟನ್ ತಂಡ ಚಾಂಪಿಯನ್ ಎಂದು ಘೋಷಣೆ.
ಆಟಗಾರರಲ್ಲೇ ಕರೊನಾ ಲಕ್ಷಣ ಕಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ನ ಸೆಮಿಫೈನಲ್, ಫೈನಲ್ ಮುಂದೂಡಿಕೆ.
ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್ ದೇಶೀಯ ಕ್ರಿಕೆಟ್ ಟೂರ್ನಿ ಸ್ಥಗಿತ. ನ್ಯೂ ಸೌತ್ ವೇಲ್ಸ್ ಚಾಂಪಿಯನ್ ಎಂದು ಪ್ರಕಟ.