ಕ್ರೀಡೆ

ನಾಳೆಯಿಂದ ಕರ್ನಾಟಕ ಮಿನಿ ಕ್ರೀಡಾಕೂಟ: ಬೆಂಗಳೂರಿನಲ್ಲಿ ಆಯೋಜನೆ

ಬೆಂಗಳೂರು: ರಾಜ್ಯದ ಉದಯೋನ್ಮುಖ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿರುವ ಕರ್ನಾಟಕ ಮಿನಿ ಕ್ರೀಡಾಕೂಟದ 4ನೇ ಆವೃತ್ತಿ ನವೆಂಬರ್ 2ರಿಂದ 9ರವರೆಗೆ ನಡೆಯಲಿದೆ. 14 ವಯೋಮಿತಿಯ ಕ್ರೀಡಾಕೂಟದಲ್ಲಿ 27 ವಿಭಾಗದ ಸ್ಪರ್ಧೆಗಳು ಬೆಂಗಳೂರಿನ ವಿವಿಧ ತಾಣಗಳಲ್ಲಿ ನಿಗದಿಯಾಗಿದ್ದು, ಐದು ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.

ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಸಹಯೋಗದಲ್ಲಿ ಕ್ರೀಡಾಕೂಟ ನಡೆಯಲಿದೆ. ಕಳೆದ ಮೂರು ವರ್ಷದಿಂದ ಯಶಸ್ವಿಯಾಗಿ ಮಿನಿ ಕ್ರೀಡಾಕೂಟ (ಮಿನಿ ಒಲಿಂಪಿಕ್ಸ್) ಆಯೋಜಿಸಲಾಗಿದ್ದು, ನಗರಕ್ಕಿಂತ ಗ್ರಾಮಾಂತರ ಮತ್ತು ಗ್ರಾಮೀಣ ಭಾಗದ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಯುವ ಕ್ರೀಡಾಪಟುಗಳ ಕನಸಿಗೆ ಹೊಸ ಹುರುಪು ತುಂಬಲಿದೆ. ಈ ಕೂಟದಲ್ಲಿ ಭಾಗವಹಿಸುವ ಪ್ರತಿಭೆಗಳು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ವಿಶ್ವಾಸವಿದೆ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಹಾಗೂ ಎಂಎಲ್ಸಿ ಡಾ.ಕೆ. ಗೋವಿಂದರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಗುಣಮಟ್ಟ ಸೌಲಭ್ಯದ ಜತೆಗೆ ಕ್ರೀಡಾ ಸಮವಸದ ಕಿಟ್ ವಿತರಿಸಲಾಗುವುದು. ಪ್ರತಿ ವಿಭಾಗದಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆದ ತಂಡಗಳನ್ನು ಆಯಾ ರಾಜ್ಯ ಸಂಸ್ಥೆಗಳು ಆಯ್ಕೆ ಮಾಡಿದ್ದು, ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ವಿಜೇತರಿಗೆ ಪದಕ, ಟ್ರೋಫಿ ವಿತರಿಸಲಾಗುವುದು ಎಂದು ಗೋವಿಂದರಾಜ್ ಮಾಹಿತಿ ನೀಡಿದರು.

ಸಿಎಂ ಚಾಲನೆ

ನಗರದ ವಿವಿಧ ಭಾಗಗಳಲ್ಲಿ ನಡೆಯಲಿರುವ ಕೂಟಕ್ಕೆ ನ.2ರಂದು ಸಂಜೆ ಐದು ಗಂಟೆಗೆ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ ಸೇರಿ ಇತರ ಗಣ್ಯರು ಹಾಜರಿರಲಿದ್ದಾರೆ.

27 ವಿಭಾಗಗಳಲ್ಲಿ ಸ್ಪರ್ಧೆ

ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಬಾಕ್ಸಿಂಗ್,ಕನೋಯಿಂಗ್ ಹಾಗೂ ಕಯಾಕಿಂಗ್, ಗಾಲ್ಫ್, ಸೈಕ್ಲಿಂಗ್,, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್, ಹಾಕಿ, ಜುಡೋ, ಕಬಡ್ಡಿ, ಖೋಖೋ, ಲಾನ್ ಟೆನಿಸ್, ನೆಟ್‌ಬಾಲ್, ರೈಡಿಂಗ್, ಫೆನ್ಸಿಂಗ್, ರೈಫಲ್ ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೇಕ್ವಾಂಡೋ, ವಾಲಿಬಾಲ್, ವೇಯ್ಟಲಿಫ್ಟಿಂಗ್, ಕುಸ್ತಿ, ವುಶು ಸೇರಿ ಒಟ್ಟು 27 ಕ್ರೀಡಾ ವಿಭಾಗಗಳಲ್ಲಿ ಮಿನಿ ಕ್ರೀಡಾಕೂಟ ನಡೆಯಲಿದೆ.

ವಿವಿಧ ತಾಣಗಳಲ್ಲಿ ಆಯೋಜನೆ

ಹ್ಯಾಂಡ್‌ಬಾಲ್, ನೆಟ್‌ಬಾಲ್ ಮತ್ತು ಖೋಖೋ ವಿದ್ಯಾನಗರದ ಡಿವೈಇಎಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ರೈಫಲ್ ಸ್ಪರ್ಧೆಗಳು ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರ, ಸೈಕ್ಲಿಂಗ್ ನೈಸ್ ರಸ್ತೆ, ಗಾಲ್ಫ್ ಬೆಂಗಳೂರು ಗಾಲ್ಫ್ ಕ್ಲಬ್, ಜಿಮ್ನ್ಯಾಸ್ಟಿಕ್ಸ್ ವೈಟ್ ಫೀಲ್ಡ್ನಲ್ಲಿರುವ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್, ಕಂಠೀರವ ಕ್ರೀಡಾಂಗಣದ ಕೆಎಸ್‌ಎಲ್‌ಟಿಎ ಕೇಂದ್ರದಲ್ಲಿ ಲಾನ್ ಟೆನಿಸ್ ನಡೆಯಲಿದೆ. ಎಂಬೆಸಿ ಇಂಟರ್ ನ್ಯಾಷನಲ್ ಕುದುರೆ ರೈಡಿಂಗ್ ಶಾಲೆಯಲ್ಲಿ ರೈಡಿಂಗ್, ಹಲಸೂರು ಈಜುಕೊಳದಲ್ಲಿ ಈಜು, ಶಾಂತಿನಗರದ ಕೆ.ಎಂ.ಕಾರಿಯಪ್ಪ ಹಾಕಿ ಅಕಾಡೆಮಿಯಲ್ಲಿ ಹಾಕಿ ನಡೆಯಲಿದೆ. ಉಳಿದೆಲ್ಲ ಕ್ರೀಡೆಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ.