ನವದೆಹಲಿ: ರಸ್ತೆ ಅಪಘಾತದಿಂದ ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ರಿಷಭ್ ಪಂತ್ ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವಲ್ಲಿ ತಮ್ಮದೇಯಾದ ಕೊಡುಗೆಯನ್ನು ನೀಡಿದ ಪಂತ್, ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಜಾದೂ ಮಾಡಿದರು. ಸುಮಾರು ಎರಡು ವರ್ಷಗಳ ನಂತರ ಟೆಸ್ಟ್ ಆಡುತ್ತಿರುವ ರಿಷಭ್, ಈ ಸ್ವರೂಪದಲ್ಲೂ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಎರಡು ಪಂದ್ಯಗಳು ಟೆಸ್ಟ್ ಸರಣಿಯನ್ನು ಆಡುತ್ತಿದೆ. ನಿನ್ನೆಯಷ್ಟೇ ಮೊದಲ ಸರಣಿ ಮುಗಿದಿದ್ದು, ಟೀಮ್ ಇಂಡಿಯಾ ಭರ್ಜರಿ ಜಯದಾಖಲಿಸಿದೆ. ಈ ಟೆಸ್ಟ್ ಸರಣಿಯ ಮೊದಲ ಇನಿಂಗ್ಸ್ನಲ್ಲಿ 39 ರನ್ ಗಳಿಸಿ ವಿಫಲವಾದರೂ ಎರಡನೇ ಇನಿಂಗ್ಸ್ನಲ್ಲಿ ಪಂತ್ ಸಿಡಿದೆದ್ದರು. ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಅವರು 13 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ನೆರವಿನಿಂದ (109) ಅದ್ಬುತ ಇನಿಂಗ್ಸ್ ಆಡಿದರು.
ಆದರೆ, ಪಂತ್ ತಮ್ಮ ಬ್ಯಾಟಿಂಗ್ ಸಮಯದಲ್ಲಿ ಎದುರಾಳಿ ಬಾಂಗ್ಲಾದೇಶ ತಂಡದ ಫೀಲ್ಡ್ ಅನ್ನು ಸೆಟ್ ಮಾಡವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಆದರೆ, ಇದರ ಹಿಂದೆ ಒಂದು ಬಲವಾದ ಕಾರಣವಿದ್ದು, ಅದೇನೆಂಬುದನ್ನು ಸ್ವತಃ ಪಂತ್ ಅವರೇ ತಿಳಿಸಿದ್ದಾರೆ.
ಶುಭಮಾನ್ ಗಿಲ್ ಜತೆಗೂಡಿ ಶತಕ ಸಿಡಿಸಿದ ಪಂತ್, ಈ ಜತೆಯಾಟದ ವೇಳೆ, “ಓರ್ವ ಫೀಲ್ಡರ್ ಇಲ್ಲಿಗೆ ಬೇಕು’ ಎಂದು ಮಿಡ್ವಿಕೆಟ್ನತ್ತ ತೋರಿಸಿದರು. ಅದರಂತೆ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ, ಮಿಡ್ವಿಕೆಟ್ಗೆ ಫೀಲ್ಡರ್ ಕಳುಹಿಸಿದರು. ಪಂತ್ ಆಡಿದ ಮಾತುಗಳು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ. ಈ ಕುತೂಹಲಕಾರಿ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶದ ಫೀಲ್ಡಿಂಗ್ ಸೆಟ್ ಮಾಡಲು ಕಾರಣ ಏನೆಂಬುದನ್ನು ಪಂದ್ಯದ ನಂತರ ಪಂತ್ ತಿಳಿಸಿದರು. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.
ಮೈದಾನದ ಹೊರಗೆ ನಾನು ಅಜಯ್ ಜಡೇಜಾ ಅವರೊಂದಿಗೆ ಆಗಾಗ ಮಾತನಾಡುತ್ತಿರುತ್ತೇನೆ. ಆಟದ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಅವರು ನನಗೆ ಹೇಳುತ್ತಾರೆ. ಎಲ್ಲಿ, ಯಾವಾಗಲಾದರೂ ಗುಣಮಟ್ಟದ ಕ್ರಿಕೆಟ್ ಆಡಬೇಕೆಂದು ಹೇಳುತ್ತಾರೆ. ಬಾಂಗ್ಲಾ ವಿರುದ್ಧ ನಾನು ಬ್ಯಾಟ್ ಮಾಡುವಾಗ ಮಿಡ್ ವಿಕೆಟ್‌ನಲ್ಲಿ ಯಾರೂ ಇರಲಿಲ್ಲ. ಇಬ್ಬರು ಒಂದೇ ಜಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಹಾಗಾಗಿ ಫಿಲ್ಡ್ಗೆ ಸಲಹೆ ನೀಡಿದೆ. ಅಜಯ್ ಜಡೇಜಾ ಅವರ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ಧೋನಿ ಸಾಧನೆ ಸರಿಗಟ್ಟಿದ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಎಂಎಸ್ ಧೋನಿ ಅವರ ದಾಖಲೆಯನ್ನು ರಿಷಭ್ ಪಂತ್ ಸರಿಗಟ್ಟಿದರು. ಧೋನಿ 6 ಶತಕ ಸಿಡಿಸಲು 144 ಇನಿಂಗ್ಸ್ ಆಡಿದ್ದರೆ, ಪಂತ್ 58 ಇನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷವೆನಿಸಿದೆ. ಪಂತ್ 2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬಳಿಕ ವಿಶ್ವದ ಬೇರಾವುದೇ ತಂಡದ ವಿಕೆಟ್ ಕೀಪರ್ ಅವರಷ್ಟು ಶತಕ ಸಿಡಿಸಿಲ್ಲ ಎಂಬುದು ಗಮನಾರ್ಹ. ಕ್ವಿಂಟನ್ ಡಿಕಾಕ್, ಲಿಟನ್ ದಾಸ್ ಮತ್ತು ಮೊಹಮದ್ ರಿಜ್ವಾನ್ ತಲಾ 3 ಶತಕ ಸಿಡಿಸಿರುವುದು ನಂತರದ ಗರಿಷ್ಠವಾಗಿದೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಪಾಕಿಸ್ತಾನದ ವಿರುದ್ಧ ಗೆದ್ದು ಸಂಪೂರ್ಣ ವಿಶ್ವಾಸದಲ್ಲಿದ್ದ ಪ್ರವಾಸಿ ತಂಡಕ್ಕೆ ದೊಡ್ಡ ಆಘಾತವನ್ನು ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಮೊದಲ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 376 ಮತ್ತು 287-4 ರನ್ ಗಳಿಸಿ ಎದುರಾಳಿಗಳಿಗೆ 515 ರನ್ಗಳ ಬೃಹತ್ ಗುರಿ ನೀಡಿತು. ಬೃಹತ್ ಗುರಿ ಬೆನ್ನತ್ತಿದ್ದ ಬಾಂಗ್ಲಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿ ತಂಡವು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ ತಂಡಕ್ಕೆ 280 ರನ್ಗಳ ಭರ್ಜರಿ ಜಯ ದಾಖಲಿಸಿತು.
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಜಯ ಕಂಡ ಬಳಿಕ ಟೀಮ್ ಇಂಡಿಯಾವನ್ನು ಸೋಲಿಸುವ ಹುರುಪಿನೊಂದಿಗೆ ಕಣಕ್ಕಿಳಿದಿದ್ದ ಬಾಂಗ್ಲಾ ತಂಡಕ್ಕೆ ಭಾರತ ಮೊದಲ ಪಂದ್ಯದಲ್ಲಿ ಶಾಕ್ ನೀಡಿದ್ದು, ಸರಣಿಯ ಎರಡನೇ ಪಂದ್ಯ ಅಕ್ಟೋಬರ್ 01ರಂದು ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆಯಲಿದೆ. (ಏಜೆನ್ಸೀಸ್)