ಬಾರ್ಬೋಡಾಸ್: ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ನ 43ನೇ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಸೂಪರ್ 08 ಹಂತದ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೂ ಟೀಮ್ ಇಂಡಿಯಾ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದ್ದು, ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗುತ್ತಿದೆ.
ಇನ್ನೂ ತಂಡದ ಆಲ್ರೌಂಡ್ ಪ್ರದರ್ಶನದ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕಳೆದ ಎರಡು ವರ್ಷಗಳಿಂದ ನಾವು ಇಲ್ಲಿ ಟಿ20 ಪಂದ್ಯಗಳನ್ನು ಆಡಿದ್ದು, ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಪರಿಸ್ಥಿತಿಗೆ ತಕ್ಕಂತೆ ಯೋಜನೆ ರೂಪಿಸಿ ಆಟವಾಡುತ್ತಿದ್ದೇವೆ. ಬ್ಯಾಟರ್ಗಳು ಈ ಪಿಚ್ನಲ್ಲಿ 180 ರನ್ ಗಳಿಸಿದರು. ಬೌಲರ್ಗಳು ಅದನ್ನು ಸಮರ್ಥಿಸಿಕೊಂಡ ರೀತಿ ತುಂಬಾ ಚೆನ್ನಾಗಿತ್ತು. ಒಟ್ಟಾರೆಯಾಗಿ ನಾವು ತಂಡವಾಗಿ ನೀಡಿದ ಪ್ರದರ್ಶನ ಗೆಲುವಿನಲ್ಲಿ ಪ್ರಮುಖವಾಯಿತು.
ಪ್ರತಿಯೊಬ್ಬ ಆಟಗಾರನು ತಮ್ಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸೂರ್ಯ ಮತ್ತು ಹಾರ್ದಿಕ್ ಜೊತೆಯಾಟ ಮತ್ತು ಬುಮ್ರಾ ಬೌಲಿಂಗ್ ಮಾಡಿದ ರೀತಿ ಪ್ರಶಂಸನೀಯವಾಗಿದೆ. ಬುಮ್ರಾ ಆಟವಾಡುತ್ತಿರುವ ರೀತಿ ತಂಡಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಯಾವ ಕ್ಷಣವಾದರೂ ಅವರು ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಬ್ಯಾಟ್ಸ್ಮನ್ಗಳು ಸೂರ್ಯಕುಮಾರ್ ಯಾದವ್ (53 ರನ್, 28 ಎಸೆತ, 5 ಬೌಡಂರಿ, 3 ಸಿಕ್ಸರ್) ಅರ್ಧಶತಕದ ಫಲವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. 182 ರನ್ಗಳ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಟೀಮ್ ಇಂಡಿಯಾ ಬೌಲರ್ಗಳು ಎದುರಾಳಿ ತಂಡವನ್ನು 134 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ತಂಡಕ್ಕೆ 47 ರನ್ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.