ಕ್ರೀಡೆ

ಶ್ರೀಜೇಶ್​ಗೆ ಪತ್ರ ಬರೆದು ಹಾರೈಸಿದ ಪ್ರಧಾನಿ ಮೋದಿ

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ ಕಂಚಿನ ಪದಕ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಹೊಂದಿದ ಭಾರತ ತಂಡದ ಗೋಲು ಕೀಪರ್​ ಪಿಆರ್​ ಶ್ರೀಜೇಶ್​ಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಶುಭಹಾರೈಸಿದ್ದಾರೆ. ಶ್ರೀಜೇಶ್​ 15 ವರ್ಷಗಳ ವೃತ್ತೀಜಿವನದ ವೇಳೆ ಭಾರತೀಯ ಹಾಕಿಗೆ ನೀಡಿರುವ ಕೊಡುಗೆಯನ್ನು ಪ್ರಶಂಸಿಸಿರುವ ಮೋದಿ, ಜೂನಿಯರ್​ ರಾಷ್ಟ್ರೀಯ ತಂಡದ ಹೊಸ ಕೋಚ್​ ಆಗಿ ಅವರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಶ್ರೀಜೇಶ್​ ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡು, ಮೋದಿಗೆ ಕೃತಜ್ಞತೆ ತಿಳಿಸಿದ್ದಾರೆ.

"ಹಲವಾರು ಪ್ರಶಸ್ತಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪದಕ ಗೆಲುವುಗಳು ಸಾಧನೆಯ ಮೂಲಕ ನೀವು ಏರಿರುವ ಎತ್ತರಕ್ಕೆ ಸಾಯಾಗಿವೆ. ಆದರೆ ನೀವು ಯಾವಾಗಲೂ ನೀವಾಗಿಯೇ ಇದ್ದಿರಿ. ಮೈದಾನದೊಳಗೆ ಮತ್ತು ಹೊರಗೆ ನಮ್ರತೆ ಮತ್ತು ವಿನಯತೆ ತೋರಿದ್ದೀರಿ. ನಿಮ್ಮ ಪ್ಯಾಷನ್​, ಬದ್ಧತೆ, ಸಮರ್ಪಣೆ ಮತ್ತು ದೃಢಸಂಕಲ್ಪ ಯುವ ಆಟಗಾರರಿಗೆ ಸ್ಫೂರ್ತಿ ತುಂಬುವ ವಿಶ್ವಾಸವಿದೆ. ನೀವು ನೀಡಿರುವ ಸ್ಮರಣೀಯ ನೆನಪುಗಳಿಗಾಗಿ ಧನ್ಯವಾದಗಳು' ಎಂದು ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, "ನನ್ನ ನಿವೃತ್ತಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್​ ಅವರಿಂದ ಈ ಹೃದಯಸ್ಪರ್ಶಿ ಪತ್ರ ಲಭಿಸಿದೆ. ಹಾಕಿ ನನ್ನ ಜೀವನ. ನಾನು ಇದರ ಸೇವೆ ಮಾಡುವುದನ್ನು ಮುಂದುವರಿಸುವೆ. ಭಾರತ ಹಾಕಿಯಲ್ಲಿ ಶಕ್ತಿಶಾಲಿಯಾಗಿ ಬೆಳೆಯುವತ್ತ ಶ್ರಮಿಸುವೆ. 2020, 2024ರ ಒಲಿಂಪಿಕ್ಸ್​ ಕಂಚಿನ ಪದಕ ಗೆಲುವಿನೊಂದಿಗೆ ಈ ಪ್ರಕ್ರಿಯೆ ಈಗಾಗಲೆ ಶುರುವಾಗಿದೆ. ನನ್ನ ಮೇಲಿಟ್ಟಿರುವ ನಂಬಿಕೆಗಾಗಿ ಪಿಎಂ ಸರ್​ಗೆ ಧನ್ಯವಾದಗಳು' ಎಂದು ಶ್ರೀಜೇಶ್​ ಹೇಳಿದ್ದಾರೆ.