ಕ್ರೀಡೆ

ಕ್ರಿಕೆಟ್​​ ಇತಿಹಾಸದಲ್ಲೇ ನೀವು ಇದುವರೆಗೂ ನೋಡಿರದ ವಿಚಿತ್ರ ರನೌಟ್ ಇದು! ವಿಡಿಯೋ ವೈರಲ್​​

ಹೈದರಾಬಾದ್​: ಖ್ಯಾತ ಸಂಗೀತ ನಿರ್ದೇಶಕ ಎಸ್​. ಥಮನ್ ಅವರ ಕ್ಯಾಚಿ ಟ್ಯೂನ್​ಗಳಿಗೆ ಮರುಳಾಗದವರೇ ಇಲ್ಲ. ಕನ್ನಡದಲ್ಲಿ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಚಕ್ರವ್ಯೂಹ ಮತ್ತು ಯುವರತ್ನ ಸಿನಿಮಾಗಳಿಗೆ ಮ್ಯೂಸಿಕ್​ ನೀಡಿದ್ದಾರೆ. ಈ ಎರಡು ಚಿತ್ರದ ಹಾಡುಗಳು ಸೂಪರ್​ ಡೂಪರ್​ ಹಿಟ್​ ಆದವು. ತೆಲುಗಿನಲ್ಲಿ ತುಂಬಾ ಫೇಮಸ್​ ಆಗಿರುವ ಥಮನ್​, ಸಂಗೀತದಿಂದಾಚೆಗೆ ಮತ್ತೊಂದು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಯಾವುದು ಆ ಕ್ಷೇತ್ರವೆಂದರೆ ಅದೇ ಕ್ರಿಕೆಟ್​. ಥಮನ್​ ಅವರಿಗೆ ಕ್ರಿಕೆಟ್​ ಅಂದ್ರೆ ತುಂಬಾ ಇಷ್ಟ. ಸಿಸಿಎಲ್​ನಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಕಳೆದ ಬಾರಿ ತೆಲುಗು ವಾರಿಯರ್ಸ್​ ಟ್ರೋಫಿ ಜಯಿಸಲು ಥಮನ್​ ಪ್ರಮುಖ ಪಾತ್ರವಹಿಸಿದ್ದರು.

ಈ ಬಾರಿಯು ಥಮನ್​ ತೆಲುಗು ವಾರಿಯರ್ಸ್​ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆಯಷ್ಟೇ ತೆಲುಗು ವಾರಿಯರ್ಸ್​ ಮತ್ತು ಪಂಜಾಬ್​ ದೆ ಶೇರ್​ ನಡುವೆ ನಡೆದ ಪಂದ್ಯದಲ್ಲಿ ಥಮನ್​ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿ ಗೆಲುವು ದೊರಕಿಸಿ ಕೊಟ್ಟರು.

ನಿನ್ನೆ ತುಂಬಾ ಗಮನ ಸೆಳೆದಿದ್ದು ಥಮನ್​ ಔಟಾದ ರೀತಿ. ಹೌದು, ಇದುವರೆಗೂ ಕ್ರಿಕೆಟ್​ ಇತಿಹಾಸದಲ್ಲೇ ಈ ರೀತಿ ಔಟಾಗಿಲ್ಲ. ಹೌದು, ಎರಡನೇ ಇನ್ನಿಂಗ್ಸ್​ನಲ್ಲಿ ಸ್ಫೋಟಕ ಆಟವಾಡುತ್ತಿದ್ದ ಥಮನ್​, ಒಂದು ಎಸೆತವನ್ನು ಬಲವಾಗಿ ಬಾರಿಸಲು ಮುಂದಾದರು. ಆದರೆ, ಆ ಚೆಂಡು ಬೌಲರ್​ ಹತ್ತಿರ ಹೋಗಿ ನಿಂತುಕೊಂಡಿತು. ಈ ವೇಳೆ ಥಮನ್​ ಒಂದು ರನ್​ ಕದಿಯಲು ಯತ್ನಿಸಿದರು. ಈ ವೇಳೆ ಬೌಲರ್​ ಓಡಿಹೋಗಿ ಚೆಂಡ್​ ಎತ್ತಿಕೊಳ್ಳಲು ಯತ್ನಿಸಿದಾಗ ಥಮನ್​ ಕೂಡ ವೇಗವಾಗಿ ಬೌಲರ್​ ಕಡೆ ನುಗ್ಗಿದರು. ಇದರಿಂದ ರನೌಟ್​ ಮಾಡಲು ಬೌಲರ್​ಗೆ ಅಡ್ಡಿಯಾಯಿತು. ಇದನ್ನು ಥಮನ್​ ಉದ್ದೇಶಪೂರ್ವಕವಾಗಿ ಮಾಡಿದರೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ, ಫೀಲ್ಡರ್​ಗೆ ಅಡ್ಡಿಪಡಿಸಿದ್ದಕ್ಕೆ ಅಂಪೈರ್​ ಔಟ್​ ಎಂದು ತೀರ್ಪು ನೀಡಿದರು.

ಕ್ರಿಕೆಟ್​ ಇತಿಹಾಸದಲ್ಲೇ ಈ ರೀತಿಯ ರನೌಟ್​ ನಡೆದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿರಿ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ಮೊದಲ ಇನ್ನಿಂಗ್ಸ್​ನಲ್ಲಿ 10 ಓವರ್​ಗೆ 7 ವಿಕೆಟ್​ ನಷ್ಟಕ್ಕೆ 72 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್​ ಮೊದಲ ಇನ್ನಿಂಗ್ಸ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 59 ರನ್​ ಮಾತ್ರ ಕಲೆಹಾಕಿತು. 13 ರನ್​ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಂಜಾಬ್​ 10 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 93 ರನ್​ ಕಲೆಹಾಕಿತು. ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್​ ಥಮನ್​ (30 ಎಸೆತಕ್ಕೆ 67 ರನ್​) ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ 9.4 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 108 ರನ್​ ಕಲೆಹಾಕಿ ಗೆಲುವಿನ ದಡ ಮುಟ್ಟಿತು. (ಏಜೆನ್ಸೀಸ್​)