ಕ್ರೀಡೆ

ಇನ್ನು ಐಪಿಎಲ್​ನಂತೆ ಟೆಸ್ಟ್​ ಕ್ರಿಕೆಟ್​ ಕೂಡ ಶ್ರೀಮಂತ! ಬಿಸಿಸಿಐ ತೆಗೆದುಕೊಂಡ ಈ ವಿಶೇಷ ನಿರ್ಧಾರವೇ ಕಾರಣ...

ನವದೆಹಲಿ: ಐಪಿಎಲ್​ನಂತೆ ಟೆಸ್ಟ್​ ಕ್ರಿಕೆಟ್​ ಪಂದ್ಯವನ್ನೂ ಆರ್ಥಿಕವಾಗಿ ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಶನಿವಾರ ಭಾರತ ತಂಡ ಧರ್ಮಶಾಲಾ ಟೆಸ್ಟ್​ ಗೆದ್ದ ಬೆನ್ನಲ್ಲೇ ವಿಶೇಷ ಘೋಷಣೆಯೊಂದನ್ನು ಮಾಡಿದೆ. ಇದರನ್ವಯ ಭಾರತದ ಟೆಸ್ಟ್​ ಕ್ರಿಕೆಟಿಗರು ಇನ್ನು ಅಧಿಕ ಪಂದ್ಯಗಳನ್ನು ಆಡಿದರೆ, ಪಂದ್ಯದ ಸಂಭಾವನೆಯ ಜತೆಗೆ ವಿಶೇಷ ಭತ್ಯೆಯನ್ನೂ ಪಡೆಯಲಿದ್ದಾರೆ. ಇದರಿಂದ ಇನ್ನು ಟೆಸ್ಟ್​ ಕ್ರಿಕೆಟಿಗರೂ, ಐಪಿಎಲ್​ ಆಟಗಾರರಂತೆ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ಹಣ ಸಂಪಾದಿಸಲಿದ್ದಾರೆ.

ಭಾರತ ತಂಡ ವರ್ಷವೊಂದರಲ್ಲಿ ಆಡುವ ಪಂದ್ಯಗಳ ಪೈಕಿ ಶೇ. 75ರಷ್ಟು ಪಂದ್ಯಗಳನ್ನು ಆಡುವ ಆಟಗಾರರು ಇನ್ನು ಪಂದ್ಯ ಸಂಭಾವನೆಯ 3 ಪಟ್ಟು ಅಂದರೆ ತಲಾ 45 ಲಕ್ಷ ರೂ. ವಿಶೇಷ ಭತ್ಯೆ ಪಡೆಯಲಿದ್ದಾರೆ. ಶೇ. 50ರಷ್ಟು ಪಂದ್ಯಗಳನ್ನು ಆಡುವ ಆಟಗಾರರು ತಲಾ 30 ಲಕ್ಷ ರೂ. ವಿಶೇಷ ಭತ್ಯೆ ಪಡೆಯಲಿದ್ದಾರೆ. ಇನ್ನುಳಿದಂತೆ ಎಲ್ಲ ಆಟಗಾರರು ಪ್ರತಿ ಟೆಸ್ಟ್​ ಪಂದ್ಯಕ್ಕೆ ಎಂದಿನಂತೆ 15 ಲಕ್ಷ ರೂ. ಸಂಭಾವನೆಯನ್ನೂ ಪಡೆಯಲಿದ್ದಾರೆ.

ಇನ್ನು ವರ್ಷವೊಂದರಲ್ಲಿ ಆಟಗಾರನೊಬ್ಬ 10 ಟೆಸ್ಟ್​ ಆಡಿದರೆ 4.50 ಕೋಟಿ ರೂ. ವಿಶೇಷ ಭತ್ಯೆ ಪಡೆಯಬಹುದಾಗಿದೆ. ಭಾರತ ವರ್ಷವೊಂದರಲ್ಲಿ ಒಟ್ಟು 9 ಟೆಸ್ಟ್​ ಆಡಿದರೆ, 7 ಟೆಸ್ಟ್​ ಆಡಿದ ಆಟಗಾರನಿಗೂ ಪ್ರತಿ ಪಂದ್ಯಕ್ಕೆ ತಲಾ 45 ಲಕ್ಷ ರೂ.ನಂತೆ ವಿಶೇಷ ಭತ್ಯೆ ಸಿಗಲಿದೆ. 5-6 ಟೆಸ್ಟ್​ ಆಡಿದ ಆಟಗಾರನಿಗೆ ತಲಾ 30 ಲಕ್ಷ ರೂ. ವಿಶೇಷ ಭತ್ಯೆ ಸಿಗಲಿದೆ.

ಇನ್ನು ಆಟಗಾರನೊಬ್ಬ ತಂಡದಲ್ಲಿದ್ದು, ಶೇ.75ರಷ್ಟು ಪಂದ್ಯಗಳಿಗೆ ಆಡುವ 11ರ ಬಳಗದಿಂದ ಹೊರಗಿದ್ದರೆ 22.5 ಲಕ್ಷ ರೂ. ವಿಶೇಷ ಭತ್ಯೆ ಪಡೆಯಲಿದ್ದಾನೆ. ಶೇ. 50 ಪಂದ್ಯಗಳಿಗೆ 11ರ ಬಳಗದಿಂದ ಹೊರಗಿದ್ದರೆ ತಲಾ 15 ಲಕ್ಷ ರೂ. ಪಡೆಯಲಿದ್ದಾನೆ. ಎಲ್ಲ ಆಟಗಾರರಿಗೆ ವಿಶೇಷ ಭತ್ಯೆಯೊಂದಿಗೆ ಆಯಾ ಪಂದ್ಯದ ಸಂಭಾವನೆ ಮತ್ತು ಬಿಸಿಸಿಐ ವಾರ್ಷಿಕ ಗುತ್ತಿಗೆಯ ಮೊತ್ತವೂ ಪ್ರತ್ಯೇಕವಾಗಿ ಸಿಗಲಿದೆ.

2022-23ನೇ ಋತುವಿನಿಂದಲೇ ಟೆಸ್ಟ್​ ಕ್ರಿಕೆಟ್​ ವಿಶೇಷ ಭತ್ಯೆ ಯೋಜನೆ ಅನ್ವಯವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ತಿಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ಅನ್ನು ಆರ್ಥಿಕವಾಗಿಯೂ ಆಕರ್ಷಕಗೊಳಿಸಿರುವ ಬಿಸಿಸಿಐ ನಡೆಗೆ ಕ್ರಿಕೆಟ್​ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಭತ್ಯೆ ಅಲ್ಲ ಬಹುಮಾನವೆಂದ ದ್ರಾವಿಡ್​

ಟೆಸ್ಟ್​ ಕ್ರಿಕೆಟಿಗರಿಗೆ ವಿಶೇಷ ಭತ್ಯೆ ನೀಡುವ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿರುವ ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​, ಇದು ಟೆಸ್ಟ್​ ಕ್ರಿಕೆಟ್​ ಆಡಲು ನೀಡುವ ವಿಶೇಷ ಭತ್ಯೆ ಅಲ್ಲ, ಬಹುಮಾನ ಎಂದು ಹೊಗಳಿದ್ದಾರೆ. ಟೆಸ್ಟ್​ನಂಥ ಕಠಿಣ ಕ್ರಿಕೆಟ್​ ಪ್ರಕಾರಕ್ಕೆ ಬಿಸಿಸಿಐ ಮನ್ನಣೆ ನೀಡಿರುವುದು ಖುಷಿಯ ವಿಚಾರ ಎಂದು ದ್ರಾವಿಡ್​ ಹೇಳಿದ್ದಾರೆ.