ಕ್ರೀಡೆ

ಡೆಲ್ಲಿ, ಆರ್​ಸಿಬಿ ಅಲ್ಲವೇ ಅಲ್ಲ... ಈ ತಂಡವನ್ನು ಸೇರದಿರಲು ಬಯಸಿದ್ದರಂತೆ Rishabh Pant; ಅದಕ್ಕೆ ನೀಡಿದ ಕಾರಣ ಹೀಗಿದೆ

ಲಖನೌ: 18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೇ ತಿಳಗಳು ಬಾಕಿಯಿದ್ದು, ತಂಡಗಳು ಈಗಾಗಲೇ ತಯಾರಿಯನ್ನು ಆರಂಭಿಸಿದೆ. ಟೂರ್ನಿಗೆ ಪೂರ್ವಭಾವಿಯಾಗಿ ಲಖನೌ ಸೂಪರ್​ಜೈಂಟ್ಸ್​ ತಂಡದ ಹೊಸ ನಾಯಕರಾಗಿ ವಿಕೆಟ್​ ಕೀಪರ್​, ಬ್ಯಾಟರ್​ ರಿಷಭ್​ ಪಂತ್​ ನೇಮಕಗೊಂಡಿದ್ದು, ಈ ಬಗ್ಗೆ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. ಎಲ್​ಎಸ್​ಜಿ ನಾಯಕನಾಗಿ ಘೋಷಣೆಯಾದ ಬೆನ್ನಲ್ಲೇ ತಂಡಕ್ಕೆ ಕಪ್​ ಗೆಲ್ಲಿಸಿಕೊಡಲು ಶೇ. 200ರಷ್ಟು ಪ್ರಯತ್ನಿಸುವುದಾಗಿ ರಿಷಭ್​ ಪಂತ್​ (Rishabh Pant) ಹೇಳಿದ್ದಾರೆ.

2024ರ ನವೆಂಬರ್​ 24 ಹಾಗೂ 25ರಂದು ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 27 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಲಖನೌ ಸೂಪರ್​ಜೈಂಟ್ಸ್​ ಪಾಲಾಗುವ ಮೂಲಕ ರಿಷಭ್​ ಪಂತ್​​ (Rishabh Pant) ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆದಿದ್ದರು. ಇದೀಗ ಎಲ್​ಎಸ್​ಜಿ ನಾಯಕನಾದ ಬಳಿಕ ಈ ಬಗ್ಗೆ ಮಾತನಾಡಿರುವ ರಿಷಭ್​ ಹರಾಜಿನಲ್ಲಿ ಈ ಒಂದು ತಂಡದ ಪಾಲಾಗಬಾರದು ಎಂದು ಹೇಳಿದ್ದಾರೆ.

ರಿಷಬ್ ಪಂತ್‌ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಬಹುದು ಎಂದು ಊಹಿಸಲಾಗಿತ್ತು. ಆರ್ ಸಿಬಿ ಕೂಡ ಅವರಿಗಾಗಿ ಬಿಡ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ದೆಹಲಿಯ ಮಾಜಿ ಕೋಚ್ ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್‌ ಸೇರಿದ್ದ ಕಾರಣ ಆ ತಂಡವೇ ಬಿಡ್ ಮಾಡಲಿದೆ ಎನ್ನಲಾಗಿತ್ತು. ಎಂಎಸ್ ಧೋನಿ ಜೊತೆಗೆ ಉತ್ತಮ ನಂಟು ಹೊಂದಿರುವ ಕಾರಣ ಸಿಎಸ್‌ಕೆ ಕೂಡ ಬಿಡ್ ಮಾಡಬಹುದು ಎನ್ನಲಾಗಿತ್ತು. ಅಂತಿಮವಾಗಿ ಅವರು ದಾಖಲೆಯ ಮೊತ್ತಕ್ಕೆ ಎಲ್​​ಎಸ್​ಜಿ ಪಅಲಾದರು.

ಎಲ್​ಎಸ್​ಜಿ ನಾಯಕನಾಗಿ ಘೋಷಣೆಯಾದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಿಷಭ್ ಪಂತ್ (Rishabh Pant)​, ಹರಾಜಿನ ಸಮಯದಲ್ಲಿ ನನ್ನನ್ನು ತುಂಬಾ ಕಾಡಿದ ವಿಚಾರವೆಂದರೆ ನಾನು ಮಾತ್ರ ಪಂಜಾಬ್​ ತಂಡದ ಪಾಲಾಗಬಾರದಿತ್ತು. ಅವರ ಬಳಿ 112 ಕೋಟಿ ಇತ್ತು ಮತ್ತು ಶ್ರೇಯಸ್​ರನ್ನು ಖರೀದಿಸಿದ ಬಳಿಕ ನಾನು ಎಲ್‌ಎಸ್‌ಜಿಗೆ ಹೋಗಬಹುದು ಎನಿಸಿತು. ಆದರೆ ಹರಾಜಿನಲ್ಲಿ ಏನಾಗುತ್ತದೆ ಎನ್ನುವುದು ನಮಗೆ ತಿಳಿದಿರಲಿಲ್ಲ, ಆದ್ದರಿಂದ ನಾನು ಆತಂಕದಲ್ಲೇ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.

2016ರಿಂದ ಡೆಲ್ಲಿ ಕ್ಯಾಪಿಟಲ್ಸ್​ ಪರ ಐಪಿಎಲ್​ನಲ್ಲಿ ಆಡಿರುವ 26 ವರ್ಷದ ಪಂತ್​, 2021ರಲ್ಲಿ ನಾಯಕರಾಗಿ ನೇಮಕಗೊಂಡಿದ್ದರು. 2022ರ ಅಂತ್ಯದ ಕಾರು ಅಪಘಾತದ ಬಳಿಕ 2023ರ ಆವೃತ್ತಿ ತಪ್ಪಿಸಿಕೊಂಡಿದ್ದ ಪಂತ್​, 2024ರಲ್ಲಿ ಮತ್ತೆ ಡೆಲ್ಲಿ ನಾಯಕರಾಗಿ ಪುನರಾಗಮನ ಕಂಡಿದ್ದರು.   ಡೆಲ್ಲಿ ಕ್ಯಾಪಿಟಲ್ಸ್​ ಪರ 110 ಪಂದ್ಯಗಳಲ್ಲಿ 35.31 ಸರಾಸರಿಯಲ್ಲಿ ಒಂದು ಶತಕ, 18 ಅರ್ಧಶತಕ ಒಳಗೊಂಡಂತೆ 3,284 ರನ್ ಗಳಿಸಿದ್ದಾರೆ. 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗ ನೇಮಕಗೊಂಡ ರಿಷಭ್​ ಪಂತ್​ (Rishabh Pant) ತಂಡವನ್ನು ಪ್ಲೇಆಫ್​ಗೇರಿಸುವಲ್ಲಿ ಯಶಸ್ವಿಯಾಗಿದ್ದರು.