ಬೆಂಗಳೂರು ಐಟಿಎಫ್​ ಟೆನಿಸ್​ ಟೂರ್ನಿಯಲ್ಲಿ ವೈಷ್ಣವಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿ 
ಟೆನಿಸ್

ಬೆಂಗಳೂರು ಐಟಿಎಫ್​ ಟೆನಿಸ್​ ಟೂರ್ನಿಯಲ್ಲಿ ವೈಷ್ಣವಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್ (Vaishnavi Adkar)​ ಅವರ ಕನಸಿನ ಓಟಕ್ಕೆ ಫೈನಲ್​ನಲ್ಲಿ ತಡೆಬಿದ್ದಿದ್ದರೆ, ಬೆಲ್ಜಿಯಂನ ಹ್ಯಾನೆ ವಂಡೆವಿಂಕೆಲ್​ ಅವರು ಕೆಪಿಬಿ ಟ್ರಸ್ಟ್​ ಐಟಿಎಫ್​ ವುಮೆನ್ಸ್​ ಓಪನ್​ ಡಬ್ಲ್ಯು100 ಬೆಂಗಳೂರು ಟೆನಿಸ್​ ಟೂರ್ನಿಯ (KPB Trust ITF Women’s Open W100 Bengaluru 2026) ಸಿಂಗಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ್ದಾರೆ.

ಎಸ್​. ಎಂ. ಕೃಷ್ಣ ಟೆನಿಸ್​ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಪ್ರಶಸ್ತಿ ಹೋರಾಟದಲ್ಲಿ 21 ವರ್ಷದ ವೈಷ್ಣವಿ 0-6, 1-6 ನೇರಸೆಟ್​ಗಳಿಂದ ವಿಶ್ವ ನಂ. 124 ವಂಡೆವಿಂಕೆಲ್​ ಎದುರು ಸೋಲು ಅನುಭವಿಸಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು. ಕಳೆದ 17 ವರ್ಷಗಳಲ್ಲಿ ಡಬ್ಲ್ಯು100 ಟೆನಿಸ್​ ಟೂರ್ನಿಯ ಫೈನಲ್​ಗೇರಿದ ಮೊದಲ ಭಾರತೀಯ ಆಟಗಾರ್ತಿ ಎನಿಸುವ ಮೂಲಕ ಸಾನಿಯಾ ಮಿರ್ಜಾ (Sania Mirza) ಮತ್ತು ನಿರುಪಮಾ ವಸಂತ್​ ಸಾಧನೆಯನ್ನು ಸರಿಗಟ್ಟಿದ್ದ ಪುಣೆಯ ವೈಷ್ಣವಿ ಪ್ರಶಸ್ತಿ ಹೋರಾಟದಲ್ಲಿ ಕೇವಲ ಒಂದೇ ಗೇಮ್​ ಗೆದ್ದು ನಿರಾಸೆ ಮೂಡಿಸಿದರು.

ವಂಡೆವಿಂಕೆಲ್​ ಪ್ರಶಸ್ತಿಯೊಂದಿಗೆ 100 ಡಬ್ಲ್ಯುಟಿಎ ರ್ಯಾಂಕಿಂಗ್​ ಅಂಕ ಮತ್ತು 13.82 ಲಕ್ಷ ರೂ. ಗಳಿಸಿದರು. ವೈಷ್ಣವಿ 65 ರ್ಯಾಂಕಿಂಗ್​ ಅಂಕ ಮತ್ತು 7.40 ಲಕ್ಷ ರೂ. ಪಡೆದರು. ವಿಶ್ವ ನಂ. 690 ಆಗಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ವೈಷ್ಣವಿ ಇದೀಗ ತನ್ನ ಅಮೋ ಗೆಲುವಿನ ಓಟದಿಂದ ಮುಂಬರುವ ಡಬ್ಲ್ಯುಟಿಎ ರ್ಯಾಂಕಿಂಗ್​ನಲ್ಲಿ ಕನಿಷ್ಠ 200 ಸ್ಥಾನ ಮೇಲೇರುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ಅಗ್ರ 500ರೊಳಗೆ ಪ್ರವೇಶಿಸಲಿರುವ ವೈಷ್ಣವಿ, ಭಾರತದ 2ನೇ ಗರಿಷ್ಠ ಶ್ರೇಯಾಂಕಿತ ಆಟಗಾರ್ತಿ ಎನಿಸಲಿದ್ದಾರೆ.