ಬೆಂಗಳೂರು ಐಟಿಎಫ್ ಟೆನಿಸ್: ಅಚ್ಚರಿಯ ಗೆಲುವಿನೊಂದಿಗೆ ಸೆಮಿಫೈನಲ್ಗೇರಿದ ವೈಷ್ಣವಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್ (vaishnavi adkar) ವೃತ್ತೀಜಿವನದ ಅತಿದೊಡ್ಡ ಗೆಲುವು ದಾಖಲಿಸುವ ಮೂಲಕ ಕೆಪಿಬಿ ಟ್ರಸ್ಟ್ ಐಟಿಎಫ್ ವುಮೆನ್ಸ್ ಓಪನ್ ಡಬ್ಲ್ಯು100 ಬೆಂಗಳೂರು ಟೆನಿಸ್ ಟೂರ್ನಿಯ ಸಿಂಗಲ್ಸ್ (ITF Women’s Open Bengaluru) ವಿಭಾಗದಲ್ಲಿ ಸೆಮಿಫೈನಲ್ಗೇರಿದರು. ಡಬಲ್ಸ್ ವಿಭಾಗದಲ್ಲಿ ಭಾರತದ ಅಂಕಿತಾ ರೈನಾ ಇಂಡೋನೇಷ್ಯಾದ ಪ್ರಿಸ್ಕಾ ಮ್ಯಾಡೆಲಿನ್ ನುಗ್ರೋಹೊ ಜತೆಗೂಡಿ ಪ್ರಶಸ್ತಿ ಸುತ್ತಿಗೇರಿದರು.
ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಪುಣೆಯ 21 ವರ್ಷದ ವೈಷ್ಣವಿ ವಿಶ್ವ ನಂ. 148 ಹಾಗೂ 4ನೇ ಶ್ರೇಯಾಂಕಿತೆ ಆಸ್ಟ್ರೆಲಿಯಾದ ಟೇಲಹ್ ಪ್ರೆಸ್ಟನ್ ವಿರುದ್ಧ 6-3, 1-6, 6-4 ಸೆಟ್ಗಳಿಂದ ಅಚ್ಚರಿಯ ಗೆಲುವು ಸಾಧಿಸಿದರು. ವೈಷ್ಣವಿ ಮೊದಲ ಸೆಟ್ ಗೆಲುವಿನ ಬಳಿಕ 2ನೇ ಸೆಟ್ನಲ್ಲಿ ಮುಗ್ಗರಿಸಿದರು. ನಿರ್ಣಾಯಕ ಸೆಟ್ನಲ್ಲಿ ವೈಷ್ಣವಿ 3-3 ಸಮಬಲದ ಬಳಿಕ ಗೆಲುವು ಒಲಿಸಿಕೊಂಡರು.
ವೈಷ್ಣವಿ ಇನ್ನು ಉಪಾಂತ್ಯದಲ್ಲಿ 2ನೇ ಶ್ರೇಯಾಂಕಿತೆ ಥಾಯ್ಲೆಂಡ್ನ ಲಾನ್ಲಾನಾ ತಾರಾರುದೀ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮೀಸ್ನಲ್ಲಿ 3ನೇ ಶ್ರೇಯಾಂಕಿತೆ ಬೆಲ್ಜಿಯಂನ ಹನ್ನೆ ವಂದೆವಿಂಕೆಲ್ ಮತ್ತು ಅಗ್ರ ಶ್ರೇಯಾಂಕಿತೆ ತಲಿಯಾ ಗಿಬ್ಸನ್ಗೆ ಆಘಾತ ನೀಡಿದ ರಷ್ಯಾದ ಪೊಲಿನಾ ಇಯಾಟ್ಸೆಂಕೊ ಸೆಣಸಲಿದ್ದಾರೆ.
3ನೇ ಶ್ರೇಯಾಂಕಿತ ಅಂಕಿತಾ ರೈನಾ-ಪ್ರಿಸ್ಕಾ ಜೋಡಿ ಡಬಲ್ಸ್ ಸೆಮಿಸ್ನಲ್ಲಿ ಫಿನ್ಲ್ಯಾಂಡ್ನ ಅನಾಸ್ಟೆಸಿಯಾ ಕುಲಿಕೋವಾ ಮತ್ತು ರಷ್ಯಾದ ಕ್ರಿಸ್ಟಿಯಾನಾ ಸಿಡೊರೋವಾ ಜೋಡಿಯನ್ನು 6-2, 3-6, 10-5ರಿಂದ ಮಣಿಸಿ ಫೈನಲ್ಗೇರಿದರು. ನೆದರ್ಲೆಂಡ್ನ ಜಿಸ್ಮಿನ್ ಗಿಂಬ್ರೆರೆ ಜತೆಗೂಡಿ ಆಡಿದ ಭಾರತದ ಪ್ರಾರ್ಥನಾ ಥೊಂಬಾರೆ ಸೆಮೀಸ್ನಲ್ಲಿ ಮುಗ್ಗರಿಸಿದರು.