ಬೆಂಗಳೂರು ಐಟಿಎಫ್ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಸಾಧನೆ ಸರಿಗಟ್ಟಿದ ವೈಷ್ಣವಿ!
ಬೆಂಗಳೂರು: ಉದ್ಯಾನನಗರಿಯಲ್ಲಿ ಕನಸಿನ ಓಟವನ್ನು ಮುಂದುವರಿಸಿರುವ ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್ (Vaishnavi Adkar) ಅವರು ಕೆಪಿಬಿ ಟ್ರಸ್ಟ್ ಐಟಿಎಫ್ ವುಮೆನ್ಸ್ ಓಪನ್ ಡಬ್ಲ್ಯು100 ಬೆಂಗಳೂರು ಟೆನಿಸ್ ಟೂರ್ನಿಯ (KPB Trust ITF Women’s Open W100 Bengaluru 2026) ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ಈ ಮೂಲಕ ಕಳೆದ 17 ವರ್ಷಗಳಲ್ಲಿ ಮೊದಲ ಬಾರಿ ಅಂದರೆ, ಸಾನಿಯಾ ಮಿರ್ಜಾ ಬಳಿಕ ಡಬ್ಲ್ಯು100 ಟೂರ್ನಿಯಲ್ಲಿ ಫೈನಲ್ಗೇರಿದ ಮೊದಲ ಭಾರತೀಯರೆನಿಸಿದ್ದಾರೆ.
ಟೂರ್ನಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ವಿಶ್ವ ನಂ. 690 ವೈಷ್ಣವಿ, ಫೈನಲ್ ಹಾದಿಯಲ್ಲಿ ಅಗ್ರ 150ರೊಳಗಿನ ಇಬ್ಬರು ಮತ್ತು ಅಗ್ರ 250ರೊಳಗಿನ ಆಟಗಾರ್ತಿಯನ್ನು ಮಣಿಸಿದ್ದಾರೆ. ಎಸ್. ಎಂ. ಕೃಷ್ಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ ಸೆಮಿಫೈನಲ್ನಲ್ಲಿ ಪುಣೆಯ 21 ವರ್ಷದ ವೈಷ್ಣವಿ 2ನೇ ಶ್ರೇಯಾಂಕಿತೆ ಥಾಯ್ಲೆಂಡ್ನ ಲಾನ್ಲನಾ ತಾರಾರುದೀ ವಿರುದ್ಧ 6-3, 6-3 ನೇರಸೆಟ್ಗಳಿಂದ ಗೆದ್ದು ಇತಿಹಾಸ ಬರೆದರು. ವಿಶ್ವ ನಂ. 126 ತಾರಾರುದೀ ವಿರುದ್ಧ ವೈಷ್ಣವಿ 66 ನಿಮಿಷಗಳಲ್ಲೇ ಗೆದ್ದರು. 2009ರ ಪಟ್ಟಾಯ ಡಬ್ಲ್ಯುಟಿಎ ಟೂರ್ನಿಯಲ್ಲಿ ಫೈನಲ್ಗೇರಿದ್ದ ಸಾನಿಯಾ ಮಿರ್ಜಾ (Sania Mirza) ಈ ಸಾಧನೆ ಮಾಡಿದ ಕೊನೆಯ ಭಾರತೀಯರಾಗಿದ್ದರು.
ವೈಷ್ಣವಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕಿತೆ ಹಾಗೂ ವಿಶ್ವ ನಂ. 124 ಬೆಲ್ಜಿಯಂನ ಹನ್ನೆ ವಂದೆವಿಂಕೆಲ್ ವಿರುದ್ಧ ಸೆಣಸಲಿದ್ದಾರೆ. "ನಾನು ನಾಳೆ ಫೈನಲ್ ಆಡಲಿದ್ದೇನೆ ಎಂಬುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಲಿತಾಂಶದ ಬಗ್ಗೆ ಚಿಂತಿಸದೆ ಆಡುತ್ತಿದ್ದೇನೆ' ಎಂದು ವೈಷ್ಣವಿ ಗೆಲುವಿನ ಬಳಿಕ ಹೇಳಿದರು.
ರನ್ನರ್ಅಪ್ಗೆ ತೃಪ್ತಿಪಟ್ಟ ಅಂಕಿತಾ ರೈನಾ ಜೋಡಿ
ಭಾರತದ ಅನುಭವಿ ಆಟಗಾರ್ತಿ ಅಂಕಿತಾ ರೈನಾ ಮತ್ತು ಇಂಡೋನೇಷ್ಯಾದ ಪ್ರಿಸ್ಕಾ ಮ್ಯಾಡೆಲಿನ್ ನುಗ್ರೋಹೊ ಜೋಡಿ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. 3ನೇ ಶ್ರೇಯಾಂಕಿತ ಅಂಕಿತಾ ರೈನಾ-ಪ್ರಿಸ್ಕಾ ಜೋಡಿ ಫೈನಲ್ ಪಂದ್ಯದಲ್ಲಿ ಜಪಾನ್ನ ಮಿಸಕಿ ಮತ್ಸುಡ ಮತ್ತು ಇರಿ ಶಿಮಿಜು ಜೋಡಿಯ ಎದುರು 4-6, 6-3, 5-10ರಿಂದ ಪರಾಭವಗೊಂಡಿತು.