TENNIS: ಸೆರೇನಾ ವಿಲಿಯಮ್ಸ್ 4 ವರ್ಷಗಳ ಬಳಿಕ ಗೆಲುವಿನ ಪುನರಾಗಮನ
ಲಂಡನ್: ಅಮೆರಿಕದ 23 ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಸೆರೇನಾ ವಿಲಿಯಮ್ಸ್ (Serena Williams) 4 ವರ್ಷಗಳ (1,375 ದಿನ) ಬಳಿಕ ವೃತ್ತಿಪರ ಟೆನಿಸ್ಗೆ ಗೆಲುವಿನ ಪುನರಾಗಮನ ಕಂಡಿದ್ದಾರೆ. 44 ವರ್ಷದ ಸೆರೇನಾ ಕ್ವೀನ್ಸ್ ಕ್ಲಬ್ ಟೆನಿಸ್ (Tennis) ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಕೆನಡಾದ 19 ವರ್ಷದ ವಿಕ್ಟೋರಿಯಾ ಎಂಬೋಕೊ ಜತೆ ಶುಭಾರಂಭ ಮಾಡಿದರು.
25 ವರ್ಷಗಳ ಅಂತರವಿರುವ ಸೆರೇನಾ-ಎಂಬೋಕೊ ಜೋಡಿ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕಿತ ಅಮೆರಿಕದ ನಿಕೋಲ್ ಮೆಲಿಚರ್ ಮಾರ್ಟಿನೆಜ್ ಮತ್ತು ನ್ಯೂಜಿಲೆಂಡ್ನ ಎರಿನ್ ರೌಟ್ಲಿಫ್ ಜೋಡಿಯನ್ನು 7-6, 6-2 ನೇರಸೆಟ್ಗಳಿಂದ ಮಣಿಸಿತು. ಪಂದ್ಯದಲ್ಲಿ ಸೆರೇನಾ ಗಂಟೆಗೆ 120 ಮೈಲಿ ವೇಗದ ಸರ್ವ್ ಮಾಡಿ ಗಮನಸೆಳೆದರು.
2022ರ ಯುಎಸ್ ಓಪನ್ ಬಳಿಕ ಅವರು ಆಡಿದ ಮೊದಲ ವೃತ್ತಿಪರ ಪಂದ್ಯ ಇದಾಗಿದೆ. ಸೆರೇನಾ ಮುಂದಿನ ವಾರ ಜರ್ಮನಿಯಲ್ಲಿ ಬರ್ಲಿನ್ ಓಪನ್ನಲ್ಲೂ ಆಡಲಿದ್ದಾರೆ. ಜೂನ್ 29ರಿಂದ ನಡೆಯಲಿರುವ ವಿಂಬಲ್ಡನ್ಗೆ ಅವರು ವೈಲ್ಡ್ ಕಾರ್ಡ್ ಪಡೆಯುವ ನಿರೀಕ್ಷೆಯೂ ಇದೆ.