ಬೆಂಗಳೂರು ಐಟಿಎಫ್​ ಟೆನಿಸ್: 16ರ ಘಟ್ಟಕ್ಕೇರಿದ ಶ್ರೀವಲ್ಲಿ ರಶ್ಮಿಕಾ 
ಟೆನಿಸ್

ಬೆಂಗಳೂರು ಐಟಿಎಫ್​ ಟೆನಿಸ್: 16ರ ಘಟ್ಟಕ್ಕೇರಿದ ಶ್ರೀವಲ್ಲಿ ರಶ್ಮಿಕಾ

ಬೆಂಗಳೂರು: ಭಾರತದ ಶ್ರೀವಲ್ಲಿ ರಶ್ಮಿಕಾ ಭಾಮಿದಿಪಟಿ (Shrivalli Rashmikaa Bhamidipaty) ಅವರು ಕೆಪಿಬಿ ಟ್ರಸ್ಟ್​ ಐಟಿಎಫ್​ ಮಹಿಳಾ ಓಪನ್​ ಡಬ್ಲ್ಯು100 ಬೆಂಗಳೂರು ಟೆನಿಸ್​ ಟೂರ್ನಿಯಲ್ಲಿ 16ರ ಘಟ್ಟಕ್ಕೇರಿದ್ದಾರೆ. ಭಾರತದ ಇನ್ನಿಬ್ಬರು ಆಟಗಾರ್ತಿಯರಾದ ಮಾಯಾ ರಾಜೇಶ್ವರನ್​ ರೇವತಿ ಮತ್ತು ವೈದೇಹಿ ಚೌಧರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಎಸ್​.ಎಂ. ಕೃಷ್ಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶ್ರೀವಲ್ಲಿ ರಶ್ಮಿಕಾ ಮಾಲ್ಟಾದ ಫ್ರಾನ್ಸೆಸ್ಕಾ ಕುರ್ಮಿ ವಿರುದ್ಧ 7-6, 6-4 ನೇರಸೆಟ್​ಗಳಿಂದ ಗೆಲುವು ಸಾಧಿಸಿದರು. ಈ ಮೂಲಕ ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಭಾರತದ 3ನೇ ಆಟಗಾರ್ತಿ ಎನಿಸಿದರು. ಸಹಜಾ ಯಮಲಪಲ್ಲಿ ಮತ್ತು ವೈಷ್ಣವಿ ಅಡ್ಕರ್​ ಪ್ರಧಾನ ಸುತ್ತಿನ ಮೊದಲ ದಿನ ಈ ಸಾಧನೆ ಮಾಡಿದ್ದರು.

ಮಾಯಾ ರಾಜೇಶ್ವರ್​ 5ನೇ ಶ್ರೇಯಾಂಕಿತೆ ರಷ್ಯಾದ ಪೊಲಿನಾ ಲಾಟ್​ಚೆಂಕೊ ವಿರುದ್ಧ 1-6, 6-1, 0-6ರಿಂದ ಸೋತರೆ, ವೈದೇಹಿ ಆಸ್ಟ್ರೆಲಿಯಾದ ತಾಲಿಯಾ ಗಿಬ್ಸನ್​ ಎದುರು 4-6, 0-6ರಿಂದ ಶರಣಾದರು.