ಸ್ಪೇನ್ ಆಟಗಾರ ಪೆಡ್ರೊ ಮಾರ್ಟಿನೆಜ್ಗೆ ಬೆಂಗಳೂರು ಓಪನ್ ಕಿರೀಟ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಗ್ರ ಶ್ರೇಯಾಂಕಿತ ಸ್ಪೇನ್ ಆಟಗಾಋ ಪೆಡ್ರೊ ಮಾರ್ಟಿನೆಜ್ (Pedro Martinez) 10ನೇ ಆವೃತ್ತಿಯ ಬೆಂಗಳೂರು ಓಪನ್ (Bengaluru Open 2026) ಎಟಿಪಿ 125 ಚಾಲೆಂಜರ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಡಬಲ್ಸ್ನಲ್ಲಿ ಕೊಲಂಬಿಯಾದ ನಿಕೊಲಸ್ ಬ್ಯಾರಿಯೆಂಟೋಸ್ ಹಾಗೂ ಅಮೆರಿಕದ ಬೆಂಜಮಿನ್ ಕಿಟ್ಟೆ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಎಸ್.ಎಂ.ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ (SM Krishna Tennis Stadium) ಶನಿವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಪೆಡ್ರೊ ಮಾರ್ಟಿನೆಜ್ 7-6, 6-3 ನೇರಸೆಟ್ಗಳಿಂದ 6ನೇ ಶ್ರೇಯಾಂಕಿತ ಕಜಾಕಿಸ್ತಾನದ ಟಿಮೊೆ ಸ್ಕಟೊವ್ ಎದುರು ಗೆದ್ದು ಬೀಗಿದರು. 1 ಗಂಟೆ 56 ನಿಮಿಷಗಳ ಕಾದಾಟದ ಮೊದಲ ಸೆಟ್ನಲ್ಲಿ ನಿಕಟ ಪೈಪೋಟಿ ಏರ್ಪಟ್ಟಿತು. ಟೈಬ್ರೇಕರ್ನಲ್ಲಿ ಮೊದಲ ಸೆಟ್ ಒಲಿಸಿಕೊಂಡ ಮಾರ್ಟಿನೆಜ್ ಮೇಲುಗೈ ಸಾಧಿಸಿದರು.
ಡಬಲ್ಸ್ನಲ್ಲಿ 4ನೇ ಶ್ರೇಯಾಂಕಿತ ನಿಕೊಲಸ್ ಬ್ಯಾರಿಯೆಂಟೋಸ್ -ಬೆಂಜಮಿನ್ ಕಿಟ್ಟೆ 7-6, 7-5 ನೇರ ಸೆಟ್ಗಳಿಂದ ಮೂರನೇ ಶ್ರೇಯಾಂಕಿತ ಫ್ರಾನ್ಸ್ನ ಆರ್ಥರ್ ರೇಮಂಡ್-ಲೂಕಾ ಸ್ಯಾಂಚೆಜ್ ಜೋಡಿಗೆ ಆಘಾತ ನೀಡಿ ಪ್ರಶಸ್ತಿ ಗೆದ್ದುಕೊಂಡಿತು.