ಸಬಲೆಂಕಾ, ಕೊಸ್ಟುಕ್, ಆಂಡ್ರೀವಾ
ಪ್ಯಾರಿಸ್: ಯೂಕ್ರೇನ್ ತಾರೆ ಮಾರ್ಟಾ ಕೊಸ್ಟುಕ್ ತನ್ನ ಕನಸಿನ ಓಟವನ್ನು ವಿಸ್ತರಿಸಿದ್ದು, ವರ್ಷದ ಎರಡನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ನಾಲ್ಕರ ಘಟ್ಟಕ್ಕೇರಿದ್ದಾರೆ. ಸೆಮಿಫೈನಲ್‌ನಲ್ಲಿ 19 ವರ್ಷದ ಮಿರ‌್ರಾ ಆಂಡ್ರೀವಾ ವಿರುದ್ಧ ಸೆಣಸಲಿದ್ದು, ಕಳೆದ ಮೇನಲ್ಲಿ ನಡೆದ ಮ್ಯಾಡ್ರಿಡ್ ಓಪನ್ ನಂತರ ಇವರಿಬ್ಬರು ಪರಸ್ಪರ ಎರಡನೇ ಬಾರಿಗೆ ಎದುರಾಗಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ, ಮ್ಯಾಟಿಯೊ ಅರ್ನಾಲ್ಟಿ ಎಂಟರ ಘಟ್ಟ ಪ್ರವೇಶಿಸಿದರೆ, 2ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮೊದಲಿಗರಾಗಿ ಸೆಮಿಫೈನಲ್‌ಗೇರಿದರು.
ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ 23 ವರ್ಷದ ಮಾರ್ಟಾ ಕೊಸ್ಟುಕ್ 6-3, 2-6, 6-3 ಮೂರು ಸೆಟ್‌ಗಳ ಕಾದಾಟದಲ್ಲಿ ದೇಶಬಾಂಧವೆ ಎಲಿನಾ ಸ್ವಿಟೋಲಿನಾಗೆ ಸೋಲಿನ ಆಘಾತ ನೀಡಿದರು. ಇದರೊಂದಿಗೆ ಆವೆಮಣ್ಣಿನ ಅಂಕಣದಲ್ಲಿ ಜಯದ ಓಟವನ್ನು ಸತತ 17ನೇ ಪಂದ್ಯಕ್ಕೆ ವಿಸ್ತರಿಸಿದರು.
ಕೊಸ್ಟುಕ್‌ಗೆ ಇದು ಮೊದಲ ಗ್ರಾಂಡ್ ಸ್ಲಾಂ ಸೆಮಿಫೈನಲ್ ಆಗಿದೆ. 31 ವರ್ಷದ ಸ್ವಿಟೋಲಿನಾ ಆರನೇ ಬಾರಿಗೆ ಫ್ರಂಚ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮನ ಕಂಡರು. ಯೂಕ್ರೇನ್-ರಷ್ಯಾ ದೇಶಗಳ ನಡುವಿನ ಯುದ್ಧದ ನಡುವೆ ಕೊಸ್ಟುಕ್-ಆಂಡ್ರೀವಾ ಪೈಪೋಟಿ ಕುತೂಹಲ ಮೂಡಿಸಿದೆ.
ರಷ್ಯಾದ ಮಿರ‌್ರಾ ಆಂಡ್ರೀವಾ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ 2ನೇ ಬಾರಿಗೆ ಸೆಮಿೈನಲ್ ಪ್ರವೇಶಿಸಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ 6-0, 6-3 ನೇರ ಸೆಟ್‌ಗಳಿಂದ ರೊಮೇನಿಯಾದ ಸೊರನಾ ಸಿರ್ಸ್ಟಿಯಾ ಎದುರು ಗೆಲುವು ಒಲಿಸಿಕೊಂಡರು. ಮ್ಯಾಡ್ರಿಡ್ ಓಪನ್ನ ಫೈನಲ್‌ನಲ್ಲಿ ಕೊಸ್ಟುಕ್ ವಿರುದ್ಧ ಸೋಲಿಗೆ ಮುಯ್ಯಿ ತೀರಿಸುವ ಅವಕಾಶವೂ ಆಂಡ್ರೀವಾ ಮುಂದಿದೆ. ಸೋಲಿನೊಂದಿಗ ಸಿರ್ಸ್ಟಿನಾ ಪ್ಯಾರಿಸ್‌ಗೆ ವಿದಾಯ ಹೇಳಿದರು.
ಸೆಮೀಸ್‌ಗೆ ಜ್ವೆರೆವ್: 2024ರ ರನ್ನರ್‌ಅಪ್ ಜ್ವರೆವ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ 19 ವರ್ಷದ ಆಟಗಾರ ರಾಲ್ ಜೋಡರ್ ವಿರುದ್ಧ 7-6, 6-1, 6-3 ನೇರಸೆಟ್‌ಗಳಿಂದ ಗೆಲುವು ಸಾಧಿಸಿದರು. ಈ ಮೂಲಕ ಜ್ವೆರೆವ್ ಗ್ರಾಂಡ್ ಸ್ಲಾಂನಲ್ಲಿ 91ನೇ ಪಂದ್ಯ ಗೆದ್ದ ಸಾಧನೆ ಮಾಡಿದರು. ರೋಲ್ಯಾಂಡ್ ಗ್ಯಾರಸ್‌ನಲ್ಲಿ ಅವರು 5ನೇ ಬಾರಿ ಉಪಾಂತ್ಯಕ್ಕೇರಿದ ಸಾಧನೆ ಮಾಡಿದ್ದಾರೆ.
ಮೂರು ವರ್ಷಗಳ ನಂತರ ರೋಲ್ಯಾಂಡ್ ಗ್ಯಾರಸ್‌ನಲ್ಲಿ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ನಂ.1 ಹಾಗೂ ಬೆಲಾರಸ್‌ನ ಅರಿನಾ ಸಬಲೆಂಕಾ 7-5, 6-3 ನೇರ ಸೆಟ್‌ಗಳಿಂದ 4 ಗ್ರಾಂಡ್ ಸ್ಲಾಂ ಒಡತಿ, ಜಪಾನ್‌ನ ನವೊಮಿ ಓಸಕಾ ಎದುರು ಗೆಲುವು ದಾಖಲಿಸಿದರು. ಕಳೆದ ಬಾರಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದ ಸಬಲೆಂಕಾ ಸತತ ಎರಡನೇ ವರ್ಷವೂ ಕ್ವಾರ್ಟರ್ ಫೈನಲ್‌ಗೇರಿದರು.
4 ಗ್ರಾಂಡ್ ಸ್ಲಾಂ ಗೆದ್ದಿರುವ ಸಬಲೆಂಕಾ ಮುಂದಿನ ಸುತ್ತಿನಲ್ಲಿ ಡಯಾನಾ ಶ್ನೈಡರ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಆತಿಥೇಯ ತಾರೆ ಡಯೇನ್ ಪ್ಯಾರಿ 6-3, 6-2 ನೇರಸೆಟ್‌ಗಳಿಂದ ಪೋಲೆಂಡ್‌ನ ಮಜ ಚ್ವಾಲಿನ್‌ಸ್ಕ ಎದುರು ಪರಾಭವಗೊಂಡರು. ಇದರೊಂದಿಗೆ ಮಹಿಳಾ ಸಿಂಗಲ್ಸ್‌ನಲ್ಲಿ ಫ್ರಾನ್ಸ್ನ ಸವಾಲು ಕೊನೆಗೊಂಡಿತು. ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೇರಿದ್ದ ಚ್ವಾಲಿನ್‌ಸ್ಕ ಗ್ರಾಂಡ್ ಸ್ಲಾಂನಲ್ಲಿ ಮೊದಲ ಬಾರಿ 8ರ ಘಟ್ಟಕ್ಕೆ ಅರ್ಹತೆ ಪಡೆದರು.
ಫೆಲಿಕ್ಸ್, ಬೆರೆಟ್ಟಿನಿ ಮುನ್ನಡೆ
ವಿಶ್ವ ನಂ.1 ಜನ್ನಿಕ್ ಸಿನ್ನರ್ ನಿರ್ಗಮನ ನಂತರ ಇಟಲಿಯನ್ನರ ಆಶಾಕಿರಣ ಎನಿಸಿರುವ ಮ್ಯಾಟಿಯೊ ಬೆರೆಟ್ಟಿನಿ ಮೂರನೇ ಸುತ್ತಿನಲ್ಲಿ 6-3, 7-6, 7-6 ನೇರ ಸೆಟ್‌ಗಳಿಂದ ಅರ್ಜೆಂಟೀನಾದ ಮ್ಯಾನುಲ್ ಸೆರುನ್‌ಡೊಲೊ ವಿರುದ್ಧ ಗೆಲುವು ಒಲಿಸಿಕೊಂಡರು. ಅಮೆರಿಕದ ಫ್ರಾನ್ಸಿಸ್ ಟಿಯಫೋ ವಿರುದ್ಧ 6-7, 7-6, 6-3, 6-7, 4-6 ರಿಂದ ಜಯ ಸಾಧಿಸಿದ ಶ್ರೇಯಾಂಕರಹಿತ ಮ್ಯಾಟಿಯೊ ಅರ್ನಾಲ್ಡಿ ಎಂಟರ ಘಟ್ಟಕ್ಕೇರಿದ ಮೂರನೇ ಇಟಲಿಯ ಆಟಗಾರ.
ಬೆರೆಟ್ಟೆನಿ-ಅರ್ನಾಲ್ಡಿ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದು, ಓರ್ವ ಇಟಲಿ ಆಟಗಾರ ಸೆಮಿಫೈನಲ್‌ಗೇರುವುದು ಖಾತ್ರಿಗೊಂಡಿದೆ. 10ನೇ ಶ್ರೇಯಾಂಕಿತ ಕೊಬಲ್ಲಿ ಎಂಟರಘಟ್ಟಕ್ಕೇರಿರುವ ಮೂರನೇ ಇಟಲಿ ಆಟಗಾರ ಎನಿಸಿದ್ದಾರೆ. 4ನೇ ಶ್ರೇಯಾಂಕಿತ, ಕೆನಡದ ಫೆಲಿಕ್ಸ್ ಅಗುರ್ ಅಲಿಯಾಸಿಮ್ 6-3, 7-5, 6-1 ನೇರ ಸೆಟ್‌ಗಳಿಂದ ಚಿಲಿಯ ಅಲೆಜ್ಯಾಂಡ್ರೊ ಟ್ಯಾಬಿಲೊರನ್ನು ಮಣಿಸಿ, ಮುಂದಿನ ಸುತ್ತಿಗೇರಿದರು.