ನ್ಯೂಪೋರ್ಟ್: ಸ್ವಿಸ್ ದಿಗ್ಗಜ ರೋಜರ್ ಫೆಡರರ್ (
Roger Federer
) ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ಗೆ (
International Tennis Hall of Fame
) ಶನಿವಾರ ಸೇರ್ಪಡೆಯಾಗಿದ್ದಾರೆ. ನ್ಯೂಪೋರ್ಟ್ನಲ್ಲಿ ನಡೆದ ಈ ಐತಿಹಾಸಿಕ ಸಮಾರಂಭದ ವೇಳೆ 45 ವರ್ಷದ ಫೆಡರರ್ ಭಾವುಕರಾದರು.
ದಾಖಲೆಯ 310 ವಾರಗಳ ಕಾಲ ವಿಶ್ವ ನಂ. 1 ಆಟಗಾರರಾಗಿದ್ದ ಫೆಡರರ್, 20 ಗ್ರಾಂಡ್ ಸ್ಲಾಂಗಳ ಸಹಿತ ಒಟ್ಟು 103 ಪ್ರಶಸ್ತಿಗಳ ಒಡೆಯರಾಗಿದ್ದಾರೆ. ಈ ಪೈಕಿ ವಿಂಬಲ್ಡನ್ನಲ್ಲಿ ಸರ್ವಾಧಿಕ 8 ಬಾರಿ ಚಾಂಪಿಯನ್ ಪಟ್ಟವೇರಿದ್ದರು.
ಹಾಲ್ ಆಫ್ ಫೇಮ್ ಸೇರ್ಪಡೆಯ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ ಫೆಡರರ್, "ಇದು ನನ್ನ ಜೀವನದ ಅತ್ಯುನ್ನತ ಗೌರವವಾಗಿದೆ' ಎಂದರು. ಫೆಡರರ್ ಪತ್ನಿ ಮಿರ್ಕಾ ಫೆಡರರ್ ಕೂಡ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು. 1998ರಲ್ಲಿ 16ನೇ ವಯಸ್ಸಿನಲ್ಲೇ ವೃತ್ತಿಪರ ಟೆನಿಸ್ಗೆ ಪದಾರ್ಪಣೆ ಮಾಡಿದ್ದ ಫೆಡರರ್ 2022ರಲ್ಲಿ ನಿವೃತ್ತರಾಗಿದ್ದರು.