Wimbledon: ಪ್ಯಾಟನ್-ಹ್ಯಾರಿಗೆ ಪುರುಷರ ಡಬಲ್ಸ್ ಪ್ರಶಸ್ತಿ
ಲಂಡನ್: ಬ್ರಿಟನ್ನ ಹೆನ್ರಿ ಪ್ಯಾಟನ್ ಮತ್ತು ಫಿನ್ಲೆಂಡ್ನ ಹ್ಯಾರಿ ಹೆಲಿಯೋವಾರಾ ಜೋಡಿ ವಿಂಬಲ್ಡನ್ (Wimbledon) ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಹೆನ್ರಿ ಹ್ಯಾಟನ್ ವಿಂಬಲ್ಡನ್ನಲ್ಲಿ ಎರಡು ಬಾರಿ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡ ಮೊದಲ ಬ್ರಿಟನ್ ಆಟಗಾರ ಎನಿಸಿದರು. ಪ್ಯಾಟನ್-ಹ್ಯಾರಿ ಜೋಡಿ ಈ ಮುನ್ನ 2024ರಲ್ಲೂ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಒಲಿಸಿಕೊಂಡಿತ್ತು.
ಅಗ್ರ ಶ್ರೇಯಾಂಕಿತ ಪ್ಯಾಟನ್-ಹ್ಯಾರಿ ಜೋಡಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎಲ್ ಸಾಲ್ವಡಾರ್ನ ಮಾರ್ಸೆಲೊ ಅರೆವಾಲೋ ಮತ್ತು ಕ್ರೊಯೇಷಿಯಾದ ಮೇಟ್ ಪಾವಿಕ್ ಜೋಡಿಯನ್ನು 7-6, 7-6 ನೇರಸೆಟ್ಗಳಿಂದ ಒಂದು ಗಂಟೆ 41 ನಿಮಿಷಗಳ ಹೋರಾಟದಲ್ಲಿ ಮಣಿಸಿದರು.
ಮುಕ್ತ ಟೆನಿಸ್ ಯುಗದಲ್ಲಿ ಈ ಹಿಂದೆ ಬ್ರಿಟನ್ನ ನಾಲ್ವರು ಆಟಗಾರರು ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಆದರೆ ಅವರಲ್ಲಿ ಯಾರು ಎರಡು ಬಾರಿ ಈ ಸಾಧನೆ ಮಾಡಿರಲಿಲ್ಲ.