ಡೇವಿಸ್ ಕಪ್ಗೆ ಭಾರತ ತಂಡ ಪ್ರಕಟ; ಮಾನಸ್ ಧಾಮ್ನೆ ಹೊಸಮುಖ
ನವದೆಹಲಿ: ಪ್ರತಿಷ್ಠಿತ ಡೇವಿಸ್ ಕಪ್ (
Davis Cup
) ಪುರುಷರ ಟೆನಿಸ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಮಾನಸ್ ಧಾಮ್ನೆ ಇದೇ ಮೊದಲ ಬಾರಿಗೆ ಸ್ಥಾನ ಸಂಪಾದಿಸಿದ್ದಾರೆ. ಸೆಪ್ಟೆಂಬರ್ 18-19ರಂದು ಸಿಯೋಲ್ನಲ್ಲಿ ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧ ನಡೆಯಲಿರುವ ಕ್ವಾಲಿಫೈಯರ್ಸ್ 2ನೇ ಸುತ್ತಿನ ಕಾದಾಟಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನೆದರ್ಲ್ಯಾಂಡ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡದಲ್ಲಿದ್ದ ಎಲ್ಲ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.
ವಿಶ್ವ ನಂ. 362 ಮತ್ತು ದೇಶದ ನಂ. 2 ಸಿಂಗಲ್ಸ್ ಆಟಗಾರ ಮಾನಸ್ ಧಾಮ್ನೆ, ಸುಮಿತ್ ನಗಾಲ್ (ವಿಶ್ವ ನಂ. 235) ಮತ್ತು ದಕ್ಷಿಣೇಶ್ವರ್ ಸುರೇಶ್ (ವಿಶ್ವ ನಂ. 393) ಜತೆಗೆ ಸಿಂಗಲ್ಸ್ ವಿಭಾಗದ ಆಟಗಾರರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಯೂಕಿ ಭಾಂಬ್ರಿ (ವಿಶ್ವ ನಂ. 28) ಮತ್ತು ಎನ್. ಶ್ರೀರಾಮ್ ಬಾಲಾಜಿ (ವಿಶ್ವ ನಂ. 57) ತಂಡದಲ್ಲಿರುವ ಡಬಲ್ಸ್ ಆಟಗಾರರಾಗಿದ್ದಾರೆ. ಜೂನಿಯರ್ ಗ್ರಾಂಡ್ ಸ್ಲಾಂಗಳಲ್ಲಿ ಆಡಿರುವ ಉದಯೋನ್ಮುಖ ಆಟಗಾರ ಅರ್ನವ್ ಪಪರ್ಕರ್ ಜತೆಗೆ ಸಿದ್ಧಾರ್ಥ್ ರಾವತ್ (ವಿಶ್ವ ನಂ. 536) ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.
"ಹೆಚ್ಚಿನ ಆಟಗಾರರ ಆಯ್ಕೆಗೆ ಅವರ ನಿರ್ವಹಣೆಯೇ ಸ್ವಯಂ ಕಾರಣವಾಗಿದೆ. ಕಳೆದ ಬಾರಿಯ ಪಂದ್ಯಕ್ಕೆ ಮಾನಸ್ ಧಾಮ್ನೆ ಲಭ್ಯರಿರಲಿಲ್ಲ. ಅವರನ್ನು ಸಿಂಗಲ್ಸ್ ವಿಭಾಗದಲ್ಲಿ ಆಡಿಸುವ ಬಗ್ಗೆ, ಪರಿಸ್ಥಿತಿಯನ್ನು ಅವಲೋಕಿಸಿ ತಂಡದ ನಾಯಕ ನಿರ್ಧರಿಸಲಿದ್ದಾರೆ' ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಭಾರತ ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಆಡಿದ ಕ್ವಾಲಿಫೈಯರ್ ಮೊದಲ ಸುತ್ತಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಮೂಲಕ ಭಾರತ 2019ರಲ್ಲಿ ಹೊಸ ಸ್ವರೂಪ ಪಡೆದುಕೊಂಡಿರುವ ಡೇವಿಸ್ ಕಪ್ನಲ್ಲಿ ಮೊದಲ ಬಾರಿ 2ನೇ ಸುತ್ತಿಗೇರಿದ ಸಾಧನೆ ಮಾಡಿತ್ತು.
ದ. ಕೊರಿಯಾ ತಂಡ ಮೊದಲ ಸುತ್ತಿನಲ್ಲಿ ಅರ್ಜೆಂಟೀನಾ ಎದುರು 1-2 ಹಿನ್ನಡೆಯ ಬಳಿಕ 3-2ರಿಂದ ಗೆದ್ದು ಬೀಗಿತ್ತು. ಸಿಯೋಲ್ನಲ್ಲಿ ಗೆದ್ದ ತಂಡ ನವೆಂಬರ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್-8 ಹಂತಕ್ಕೆ ಅರ್ಹತೆ ಗಳಿಸಲಿದೆ.