ವರ್ಲ್ಡ್ ಟೆನಿಸ್ ಲೀಗ್ ಕಿರೀಟ ಮುಡಿಗೇರಿಸಿಕೊಂಡ ಮೇವರಿಕ್ಸ್ ಕೈಟ್ಸ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವರ್ಲ್ಡ್ ಟೆನಿಸ್ ಲೀಗ್ (World Tennis League) ನಾಲ್ಕನೇ ಆವೃತ್ತಿಯಲ್ಲಿ ಆಸ್ಸಿ ಮೇವರಿಕ್ಸ್ ಕೈಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿ) ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಸಿ ಮೇವರಿಕ್ಸ್ ಕೈಟ್ಸ್ ತಂಡ 22-19 ಅಂಕಗಳ ಅಂತರದಿಂದ ಎಒಎಸ್ ಈಗಲ್ಸ್ ತಂಡವನ್ನು ಮಣಿಸಿತು. ಮೊದಲ ಬಾರಿಗೆ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು.
ಪ್ರಶಸ್ತಿ ಕಾದಾಟದ ಮೊದಲ ಪಂದ್ಯದಲ್ಲಿ ಮೇವರಿಕ್ಸ್ ಕೈಟ್ ತಂಡ ಮಾರ್ಟಾ ಕೊಸ್ಟಕ್ 6-4ರಿಂದ ಈಗಲ್ಸ್ನ ಶ್ರೀವಲ್ಲಿ ಭಮಿಡಿಪಟಿ ಎದುರು ಗೆದ್ದು, ಮೇಲುಗೈ ಒದಗಿಸಿದರು. ಮಿಶ್ರ ಡಬಲ್ಸ್ನಲ್ಲಿ ಈಗಲ್ಸ್ನ ಶ್ರೀವಲ್ಲಿ&ಗೇಲ್ ಮಾನ್ಫೀಲ್ಸ್ 6-3ರಿಂದ ಕೈಟ್ಸ್ನ ಮಾರ್ಟಾ ಕೊಸ್ಟಕ್-ದಕ್ಷಿಣೇಶ್ವರ ಸುರೇಶ್ (Dhakshineswar Suresh) ಜೋಡಿಯನ್ನು ಮಣಿಸಿದರು. ಪುರುಷರ ಡಬಲ್ಸ್ನಲ್ಲಿ ಭಾರತ ದ ನಂ.1 ಸುಮಿತ್ ನಗಾಲ್-ಗೇಲ್ ಮಾನ್ಫೀಲ್ಸ್ ಜೋಡಿ 3-6ರಿಂದ ಕೈಟ್ಸ್ನ ನಿಕ್ ರ್ಕಿಗಿಯೋಸ್-ದಕ್ಷಿಣೇಶ್ವರ ಸುರೇಶ್ ಎದುರು ಪರಾಭವಗೊಂಡಿತು. ಅಂತಿಮ ಹಾಗೂ ನಿರ್ಣಾಯಕ ಸಿಂಗಲ್ಸ್ ಪಂದ್ಯದಲ್ಲಿ ದಣೇಶ್ವರ ಸುರೇಶ್, ಸುಮಿತ್ ನಗಾಲ್ರನ್ನು (Sumit Nagal) ರೋಚಕ ಕಾದಾಟದಲ್ಲಿ 7-6 ರಿಂದ ಮಣಿಸಿ, ಮೇವರಿಕ್ಸ್ ಕೈಟ್ಸ್ಗೆ ಪ್ರಶಸ್ತಿ ಖಾತ್ರಿಪಡಿಸಿದರು.
ಟೀಮ್ ಇಂಡಿಯಾ ಆಟಗಾರ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಫೈನಲ್ ಪಂದ್ಯದ ವೇಳೆ ಟೆನಿಸ್ ಆಡಿ ಪ್ರೇಕ್ಷಕರನ್ನು ರಂಜಿಸಿದರು. ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ, ರೋಹನ್ ಬೋಪಣ್ಣ ಸಹ ಹಾಜರಿದ್ದರು.