ವಿಂಬಲ್ಡನ್ ಫೈನಲ್ಗೇರಿದ ಸಿನ್ನರ್, ಜ್ವೆರೇವ್; ಮತ್ತೊಮ್ಮೆ ಸೆಮೀಸ್ನಲ್ಲೇ ಹೊರಬಿದ್ದ ಜೋಕೊವಿಕ್!
ಲಂಡನ್: ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್ ಇಟಲಿಯ ಯಾನಿಕ್ ಸಿನ್ನರ್ ಮತ್ತು ಫ್ರೆಂಚ್ ಓಪನ್ ಹಾಲಿ ಚಾಂಪಿಯನ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಪ್ರತಿಷ್ಠಿತ ವಿಂಬಲ್ಡನ್ (Wimbledon) ಗ್ರಾಸ್ ಕೋರ್ಟ್ ಗ್ರಾಂಡ್ ಸ್ಲಾಂ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಭಾನುವಾರ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಮಾಜಿ ವಿಶ್ವ ನಂ. 1 ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ ಅವರ 25ನೇ ಗ್ರಾಂಡ್ ಸ್ಲಾಂ ಗೆಲುವಿನ ಕನಸು ಮತ್ತೊಮ್ಮೆ ಭಗ್ನಗೊಂಡಿತು.
ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಸಿನ್ನರ್ 6-4, 6-4, 6-4 ನೇರಸೆಟ್ಗಳಿಂದ 7ನೇ ಶ್ರೇಯಾಂಕಿತ ಜೋಕೊವಿಕ್ ವಿರುದ್ಧ ಗೆಲುವು ದಾಖಲಿಸಿದರು. ಸಿನ್ನರ್ 2 ಗಂಟೆ, 20 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡು ಸತತ 2ನೇ ಬಾರಿ ಫೈನಲ್ ಪ್ರವೇಶಿಸಿದರು. 7ನೇ ಬಾರಿ ಗ್ರಾಂಡ್ ಸ್ಲಾಂ ಫೈನಲ್ಗೇರಿರುವ 24 ವರ್ಷದ ಸಿನ್ನರ್ 5ನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.
7 ಬಾರಿ ವಿಂಬಲ್ಡನ್ ಗೆದ್ದಿರುವ 39 ವರ್ಷದ ಜೋಕೋವಿಕ್ 2023ರ ಯುಎಸ್ ಓಪನ್ನಲ್ಲಿ ಕೊನೇ ಬಾರಿ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಬಳಿಕ 6ನೇ ಬಾರಿ ಉಪಾಂತ್ಯದಲ್ಲೇ ಮುಗ್ಗರಿಸಿದ್ದಾರೆ.
ಸತತ 2ನೇ ಫೈನಲ್ಗೇರಿದ ಜ್ವೆರೇವ್: ಕಳೆದ ಫ್ರೆಂಚ್ ಓಪನ್ನಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡಿದ್ದ ಜರ್ಮನಿಯ ತಾರೆ ಅಲೆಕ್ಸಾಂಡರ್ ಜ್ವೆರೇವ್ ಇದೀಗ ವಿಂಬಲ್ಡನ್ ಗ್ರಾಸ್ ಕೋರ್ಟ್ ಟೂರ್ನಿಯಲ್ಲೂ ಫೈನಲ್ ಪ್ರವೇಶಿಸಿದ್ದಾರೆ. 29 ವರ್ಷದ ಜ್ವೆರೇವ್ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬ್ರಿಟನ್ನ ವೈಲ್ಡ್ ಕಾರ್ಡ್ ಪ್ರವೇಶಿಗ ಆರ್ಥರ್ ಫೆರಿ ಅವರ ಕನಸಿನ ಓಟವನ್ನು ಕೊನೆಗೊಳಿಸಿದರು. ಈ ಮೂಲಕ ಜ್ವೆರೇವ್ ಸತತ 2ನೇ ಮತ್ತು ಒಟ್ಟಾರೆ 5ನೇ ಗ್ರಾಂಡ್ ಸ್ಲಾಂ ಫೈನಲ್ ಪ್ರವೇಶಿಸಿದರು. ವಿಂಬಲ್ಡನ್ನಲ್ಲಿ ಅವರು 4ನೇ ಸುತ್ತಿಗಿಂತ ಮೇಲೇರಿದ್ದು ಇದೇ ಮೊದಲಾಗಿದೆ.
2ನೇ ಶ್ರೇಯಾಂಕಿತ ಜ್ವೆರೇವ್ ಏಕಪಯ ಉಪಾಂತ್ಯದಲ್ಲಿ 23 ವರ್ಷದ ಫೆರಿ ವಿರುದ್ಧ 7-6, 6-2, 6-4 ನೇರಸೆಟ್ಗಳಿಂದ 2 ಗಂಟೆ, 14 ನಿಮಿಷಗಳಲ್ಲೇ ಗೆದ್ದರು. ವಿಶ್ವ ನಂ. 1 ಯಾನಿಕ್ ಸಿನ್ನರ್ ಮತ್ತು ಸೆರ್ಬಿಯಾ ದಿಗ್ಗಜ ನೊವಾಕ್ ಜೋಕೊವಿಕ್ ನಡುವಿನ 2ನೇ ಸೆಮೀಸ್ ವಿಜೇತರ ವಿರುದ್ಧ ಜ್ವೆರೇವ್ ಭಾನುವಾರ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ.
ಜ್ವೆರೇವ್ ಮುಕ್ತ ಟೆನಿಸ್ ಯುಗದಲ್ಲಿ ಬೋರಿಸ್ ಬೆಕರ್ ಮತ್ತು ಮೈಕೆಲ್ ಸ್ಟಿಚ್ ಬಳಿಕ ವಿಂಬಲ್ಡನ್ ಫೈನಲ್ಗೇರಿದ 3ನೇ ಜರ್ಮನಿ ಆಟಗಾರರಾಗಿದ್ದಾರೆ. ಜ್ವೆರೇವ್ ಒಂದೇ ವರ್ಷದಲ್ಲಿ ಫ್ರೆಂಚ್ ಓಪನ್-ವಿಂಬಲ್ಡನ್ ಗೆದ್ದ 7ನೇ ಆಟಗಾರ ಎನಿಸುವ ಅವಕಾಶ ಹೊಂದಿದ್ದಾರೆ. ರಾಡ್ ಲೆವರ್, ಬೋರ್ನ್ ಬೋರ್ಗ್, ರಾಫೆಲ್ ನಡಾಲ್, ರೋಜರ್ ಫೆಡರರ್, ನೊವಾಕ್ ಜೋಕೊವಿಕ್ ಮತ್ತು ಕಾಲೋರ್ಸ್ ಅಲ್ಕರಾಜ್ ಹಿಂದಿನ ಸಾಧಕರು.
"ಈ ಗ್ರಾಂಡ್ ಸ್ಲಾಂನಲ್ಲಿ ನಾನು ಈ ಹಿಂದೆ ಯಾವಾಗಲೂ ಪರದಾಡುತ್ತಿದ್ದೆ. ಈ ಬಾರಿ ಫೈನಲ್ಗೇರಿರುವುದು ಅಪಾರ ಸಂತಸ ತಂದಿದೆ' ಎಂದು ಜ್ವೆರೇವ್ ಹೇಳಿದರು.