ಕರ್ನಾಟಕ ಓಪನ್​ ಟೆನಿಸ್​: ಉಪಾಂತ್ಯಕ್ಕೇರಿ ಇತಿಹಾಸ ಬರೆದ ಕನ್ನಡಿಗ ಕ್ರಿಷ್​ ತ್ಯಾಗಿ 
ಟೆನಿಸ್

ಕರ್ನಾಟಕ ಓಪನ್​ ಟೆನಿಸ್​: ಉಪಾಂತ್ಯಕ್ಕೇರಿ ಇತಿಹಾಸ ಬರೆದ ಕನ್ನಡಿಗ ಕ್ರಿಷ್​ ತ್ಯಾಗಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವೈಲ್ಡ್​ ಕಾರ್ಡ್​ನೊಂದಿಗೆ ಕಣಕ್ಕಿಳಿದಿರುವ ಬೆಂಗಳೂರಿನ 19 ವರ್ಷದ ಆಟಗಾರ ಕ್ರಿಷ್​ ತ್ಯಾಗಿ (Kriish Tyagi) ಕರ್ನಾಟಕ ಓಪನ್​ ಎಟಿಪಿ ಚಾಲೆಂಜರ್​ ಟೆನಿಸ್ (Karnataka Open ATP Challenger)​ ಟೂರ್ನಿಯ ಕ್ವಾರ್ಟರ್​ಫೈನಲ್​ನಲ್ಲಿ ಎರಡನೇ ಶ್ರೇಯಾಂಕಿತ ಹಮಿಷ್​ ಸ್ಟೀವರ್ಟ್​ಗೆ ಆಘಾತಕಾರಿ ಸೋಲುಣಿಸಿದ್ದಾರೆ. ಈ ಮೂಲಕ ಟೂರ್ನಿಯ ಸೆಮಿಫೈನಲ್​ ಪ್ರವೇಶಿಸಿ ಇತಿಹಾಸ ಬರೆದಿದ್ದಾರೆ. ಸಿಂಗಲ್ಸ್​ ವಿಭಾಗದಲ್ಲಿ ಭಾರತದ ಮತ್ತೋರ್ವ ಆಟಗಾರ ಮನೀಷ್​ ಸುರೇಶ್​ ಕುಮಾರ್​ ಎಂಟರ ಘಟ್ಟದಲ್ಲಿ ಹೊರಬಿದ್ದರು.
ಎಸ್​.ಎಂ. ಕೃಷ್ಣ ಟೆನಿಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ನಡೆದ ಕಾದಾಟದಲ್ಲಿ ವಿಶ್ವ ನಂ. 1,322 ಕ್ರಿಷ್​ ತ್ಯಾಗಿ 7-6, 5-7, 6-4 ಸೆಟ್​ಗಳಿಂದ ವಿಶ್ವ ನಂ. 328 ಹಮಿಷ್​ ಸ್ಟೀವರ್ಟ್​ಗೆ ಆಘಾತಕಾರಿ ಸೋಲುಣಿಸಿ ಗಮನಸೆಳೆದರು. ಕ್ರಿಷ್​ ತ್ಯಾಗಿ ವೃತ್ತೀಜಿವನದಲ್ಲಿ ಇದುವರೆಗೆ ಸೋಲುಣಿಸಿದ ಅತ್ಯಂತ ಉನ್ನತ ರ್ಯಾಂಕ್​ ಆಟಗಾರ ಸ್ಟೀವರ್ಟ್​ ಆಗಿದ್ದಾರೆ. ಈ ಮೂಲಕ ಎಟಿಪಿ ಚಾಲೆಂಜರ್​ನಲ್ಲಿ ಮೊದಲ ಬಾರಿ ಉಪಾಂತ್ಯಕ್ಕೇರಿದ್ದಾರೆ. ಅವರು ಪ್ರಶಸ್ತಿ ಸುತ್ತಿಗೇರಲು 4ನೇ ಶ್ರೇಯಾಂಕಿತ ಹಾಗೂ ವಿಶ್ವ ನಂ. 357 ಆಸ್ಟ್ರೆಲಿಯಾದ ಫಿಲಿಪ್​ ಸೆಕುಲಿಕ್​ ವಿರುದ್ಧ ಸೆಣಸಲಿದ್ದಾರೆ.

ಮತ್ತೊಂದೆಡೆ ಮನೀಷ್​ ಸುರೇಶ್​ ಕುಮಾರ್​ ಬೆಲಾರಸ್​ನ ಇಲ್ಯಾ ಇವಾಷ್ಕ ವಿರುದ್ಧ 3-6, 3-6 ನೇರಸೆಟ್​ಗಳಿಂದ ಪರಾಭವಗೊಂಡರು. ಇದರಿಂದ ಈಗ ಕ್ರಿಷ್​ ತ್ಯಾಗಿ ಸಿಂಗಲ್ಸ್​ ವಿಭಾಗದಲ್ಲಿ ಭಾರತದ ಕೊನೇ ಆಶಾಕಿರಣವಾಗಿದ್ದಾರೆ.

ಡಬಲ್ಸ್​ ವಿಭಾಗದಲ್ಲಿ ಮುಕುಂದ್​ ಶಶಿಕುಮಾರ್​-ಆದಿಲ್​ ಕಲ್ಯಾಣ್​ಪುರ್​, ಸಾಕೇತ್​ ಮೈನೇನಿ-ನಿಕ್ಕಿ ಕಲಿಯಂಡ ಪೂಣಚ ಮತ್ತು ಪ್ರಜ್ವಲ್​ ದೇವ್​-ನಿತಿನ್​ ಕುಮಾರ್​ ಸಿನ್ಹಾ ಜೋಡಿ ಸೆಮಿಫೈನಲ್​ ಪ್ರವೇಶಿಸಿದೆ.