ಎಸ್ಎಂ ಕೃಷ್ಣ ಸ್ಮಾರಕ ಓಪನ್ ಟೆನಿಸ್: ಪ್ರಧಾನ ಸುತ್ತಿಗೇರಿದ ಕನ್ನಡಿಗ ಆರಾಧ್ಯ ಕ್ಷಿತಿಜ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ 17 ವರ್ಷದ ಆಟಗಾರ ಆರಾಧ್ಯ ಕ್ಷಿತಿಜ್ (Aradhya Kshitij) ಎರಡನೇ ಆವೃತ್ತಿಯ ಎಸ್ಎಂ ಕೃಷ್ಣ ಸ್ಮಾರಕ ಓಪನ್ (SM Krishna Memorial Open) ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಧಾನ ಸುತ್ತಿನ ಮೊದಲ ದಿನದ 5 ಸಿಂಗಲ್ಸ್ ಮತ್ತು ಒಂದು ಡಬಲ್ಸ್ ಪಂದ್ಯ ಉದ್ಯಾನನಗರಿಯಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಮಂಗಳವಾರಕ್ಕೆ ಮುಂದೂಡಲ್ಪಟ್ಟವು.
ಎಸ್ಎಂ ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯ ಅರ್ಹತಾ ಸುತ್ತಿನ ಎರಡನೇ ದಿನದ ಪಂದ್ಯದಲ್ಲಿ ವೈಲ್ಡ್ಕಾರ್ಡ್ ಆಟಗಾರ ಆರಾಧ್ಯ ಕ್ಷಿತಿಜ್ 7-6, 6-4 ನೇರಸೆಟ್ಗಳಿಂದ 8ನೇ ಶ್ರೇಯಾಂಕಿತ ದೇಶಬಾಂಧವ ನಿತಿನ್ ಕುಮಾರ್ ಸಿನ್ಹಾ ವಿರುದ್ಧ ಗೆದ್ದು ಪ್ರಧಾನ ಸುತ್ತಿಗೇರಿದರು. ಅರ್ಹತಾ ಸುತ್ತಿನ ಕೊನೇ ಪಂದ್ಯದಲ್ಲಿ ಆಡಿದ ಮತ್ತೋರ್ವ ಭಾರತೀಯ ದೇವ್ ಜಾವಿಯಾ 4-6, 6-7ರಿಂದ ಥಾಯ್ಲೆಂಡ್ನ ಥನಪೆಟ್ ಚಾಂಟಾ ವಿರುದ್ಧ ಸೋತು ಹೊರಬಿದ್ದರು.
ಮಧ್ಯಾಹ್ನದ ನಂತರ ಸುರಿದ ಮಳೆಯಿಂದಾಗಿ ಪ್ರಧಾನ ಸುತ್ತಿನಲ್ಲಿ ಯಾವ ಪಂದ್ಯವೂ ಪೂರ್ಣಗೊಳ್ಳಲಿಲ್ಲ. 7ನೇ ಶ್ರೇಯಾಂಕಿತ ಭಾರತದ ಕರಣ್ ಸಿಂಗ್ ಮಲೇಷ್ಯಾದ ಮಿತ್ಸುಕಿ ವೀ ಕಾಂಗ್ ವಿರುದ್ಧ ಮೊದಲ ಸೆಟ್ನಲ್ಲಿ 5-5 ಸಮಬಲದಲ್ಲಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಮುಕುಂದ್ ಶಶಿಕುಮಾರ್ ಮತ್ತು ದಿಗ್ವಿಜಯ್ ಪ್ರತಾಪ್ ಸಿಂಗ್ ಅವರ ಪಂದ್ಯಗಳು ಶುರುವಾಗಲೇ ಇಲ್ಲ.