ಬಿಲ್ಲಿ ಜೀನ್ ಕಿಂಗ್ (ಬಿಜೆಕೆ) ಕಪ್ ಪ್ಲೇಆಫ್: ಸ್ಲೊವೇನಿಯಾಗೆ ಗೆಲುವು
ಬೆಂಗಳೂರು: ಪ್ರತಿಷ್ಠಿತ ಬಿಲ್ಲಿ ಜೀನ್ ಕಿಂಗ್ (ಬಿಜೆಕೆ) ಕಪ್ ಮಹಿಳಾ ಟೆನಿಸ್ ಟೂರ್ನಿಯ ಜಿ ಗುಂಪಿನ ಪ್ಲೇಆಫ್ ಪಂದ್ಯಗಳಿಗೆ ಶುಕ್ರವಾರ ಉದ್ಯಾನನಗರಿಯಲ್ಲಿ ಚಾಲನೆ ದೊರೆಯಿತು. ಗುಂಪಿನ ಮೊದಲ ಪಂದ್ಯದಲ್ಲಿ ಸ್ಲೊವೇನಿಯಾ ತಂಡ ತನಗಿಂತ ಉನ್ನತ ಶ್ರೇಯಾಂಕಿತ ನೆದರ್ಲೆಂಡ್ ಎದುರು 2-1 ಅಂತರದೊಂದಿಗೆ ಗೆಲುವು ಖಾತ್ರಿಪಡಿಸಿಕೊಂಡಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆತಿಥ್ಯದಲ್ಲಿ ಎಸ್.ಎಂ. ಕೃಷ್ಣ ಟೆನಿಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ ಎರಡು ಬಾರಿಯ ರನ್ನರ್ ಅಪ್ ನೆದರ್ಲೆಂಡ್ ನಿರಾಸೆ ಕಂಡಿತು. ಮೊದಲ ಸಿಂಗಲ್ಸ್‌ನಲ್ಲಿ ಸ್ಲೊವೇನಿಯಾದ ತಮರಾ ಝಿದನೆಕ್ಸ್ 6-1, 7-6 (8-6) ನೇರ ಸೆಟ್‌ಗಳಿಂದ ನೆದರ್ಲೆಂಡ್‌ನ ಅರಂಟ್ಸ್ ರುಸ್ ಅವರನ್ನು ಮಣಿಸಿದರು. 2021ರ ಫ್ರೆಂಚ್ ಓಪನ್ ಸೆಮಿಫೈನಲಿಸ್ಟ್ ತಮರಾ ಝಿದನೆಕ್ಸ್ 1 ಗಂಟೆ 47 ನಿಮಿಷಗಳ ಹೋರಾಟದಲ್ಲಿ ಸ್ಲೊವೇನಿಯಾಗೆ 1-0 ಮುನ್ನಡೆ ಒದಗಿಸಿದರು.
ನಂತರ ನಿರ್ಣಾಯಕ ಎರಡನೇ ಸಿಂಗಲ್ಸ್‌ನಲ್ಲಿ ವಿಶ್ವ ನಂ. 89 ನೆದರ್ಲೆಂಡ್‌ನ ಆಟಗಾರ್ತಿ ಸುಝಾನ್ ಲೆಮನ್ಸ್ 6-7 (5-7), 6-4, 3-6 ಮೂರು ಗೇಮ್‌ಗಳ ಕಠಿಣ ಹೋರಾಟದದ ಹೊರತಾಗಿಯೂ ಕಯಾ ಜುವಾನ್ ಎದುರು ಸೋಲಿನ ಆಘಾತ ಅನುಭವಿಸಿದರು. 2 ಗಂಟೆ 34 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡ ಜುಮಾನ್ ಪಂದ್ಯದಲ್ಲಿ ಸ್ಲೊವೇನಿಯಾ ಗೆಲುವು ಖಾತ್ರಿಪಡಿಸಿದರು.
ಔಪಚಾರಿಕ ಡಬಲ್ಸ್ ಪಂದ್ಯದಲ್ಲಿ ನೆದರ್ಲೆಂಡ್‌ನ ಸುಝಾನ್ ಲೆಮೆನ್ಸ್-ಡೆಮಿ ಶೂವ್ಸ್ ಜೋಡಿ ಸ್ಲೊವೇನಿಯಾ ದಲೀಲಾ ಜಕುಪೊವಿಕ್-ನಿಕಾ ರಾಡಿಸಿಕ್ ಎದುರು 6-4, 6-0 ರಿಂದ ಗೆದ್ದು, ಅಂತರ ತಗ್ಗಿಸಿಕೊಂಡಿತು. ಆತಿಥೇಯ ಭಾರತ ತಂಡ ಶನಿವಾರ ತನ್ನ ಮೊದಲ ಪಂದ್ಯವನ್ನು ಸ್ಲೊವೇನಿಯಾ ಎದುರು ಆಡಲಿದೆ. ಆರಂಭ: ಮಧ್ಯಾಹ್ನ 3, ನೇರಪ್ರಸಾರ: ಡಿಡಿ ಸ್ಪೋರ್ಟ್ಸ್.