ನವದೆಹಲಿ: ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ಅತ್ಯುತ್ತಮ ಕ್ರೀಡಾ ಸಾಧಕರ ವಿಭಾಗಕ್ಕೆ (ಎಸ್ಒಎಂ) ಮಾಜಿ ತಾರೆಯರಾದ ಸಾನಿಯಾ ಮಿರ್ಜಾ, ಮಹೇಶ್ ಭೂಪತಿ ಮತ್ತು ಕನ್ನಡಿಗ ರೋಹನ್ ಬೋಪಣ್ಣ ಅರ್ಜಿ ಸಲ್ಲಿಸಿದ್ದಾರೆ. ಈ ಮುನ್ನ ಎಐಟಿಎ ಆಡಳಿತ ಮಂಡಳಿ ಪ್ರವೇಶಿಸುವ ಧ್ಯೇಯದೊಂದಿಗೆ ಲಿಯಾಂಡರ್ ಪೇಸ್ ಎಸ್ಒಎಂಗೆ ಅರ್ಜಿ ಸಲ್ಲಿಸಿದ್ದರು.
ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ಅನ್ವಯ ಸಾಧಕ ಕ್ರೀಡಾಪಟುಗಳಿಗೆ ಕ್ರೀಡಾ ಆಡಳಿತ ಪ್ರವೇಶಿಸಲು ಎಸ್ಒಎಂ ಮೂಲಕ ಅವಕಾಶವನ್ನು ಕಲ್ಪಿಸಲಾಗಿದೆ. ಎಐಟಿಎ ಮೂಲಗಳ ಪ್ರಕಾರ 18 ಪುರುಷರು ಮತ್ತು 8 ಮಹಿಳೆಯರ ಸಹಿತ 26 ಮಾಜಿ ಟೆನಿಸ್ ತಾರೆಯರು ಎಸ್ಒಎಂಗೆ ಅರ್ಜಿ ಸಲ್ಲಿಸಿದ್ದಾರೆ. ಹೊಸ ಕಾಯ್ದೆಯ ಅನ್ವಯ ತಿದ್ದುಪಡಿ ಆಗಿರುವ ಎಐಟಿಎ ಸಂವಿಧಾನದ ಪ್ರಕಾರ, ಎಸ್ಒಎಂನ ನಾಲ್ವರು ಪ್ರತಿನಿಧಿಗಳಿಗೆ (ತಲಾ 2 ಪುರುಷ-ಮಹಿಳೆ) ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಅವಕಾಶವಿದೆ.
ಇನ್ನು ಇಬ್ಬರು ಪ್ರತಿನಿಧಿಗಳು ಕಾರ್ಯಕಾರಿ ಸಮಿತಿಯಲ್ಲೂ ಸ್ಥಾನ ಪಡೆಯಬಹುದಾಗಿದೆ. ಕ್ರೀಡಾಪಟುಗಳನ್ನೂ ಕ್ರೀಡಾ ಆಡಳಿತದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಎಐಟಿಎ ಚುನಾವಣೆ ನವೆಂಬರ್ 27ಕ್ಕೆ ನಿಗದಿಯಾಗಿದೆ.