ಕೋಲ್ಕತ: ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಇದರಲ್ಲಿ ಗೆದ್ದರೆ ಅಜೇಯವಾಗಿ ಪ್ರಶಸ್ತಿ ಎತ್ತುವ ಆಸೆಯೂ ಹೆಚ್ಚಲಿದೆ.
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ ಓಟ ಮುಂದುವರಿಸಿದರೆ ವಿಶ್ವಕಪ್ನಲ್ಲಿ ವಿಶೇಷ ದಾಖಲೆ ಮಾಡುವ ಅವಕಾಶವನ್ನು ಹೊಂದಿದೆ. ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ 2 ತಂಡಗಳು ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿವೆ. ರೋಹಿತ್ ಶರ್ಮ ಪಡೆಗೆ 3ನೇ ತಂಡವಾಗಿ ಈ ದಾಖಲೆ ಬರೆಯುವ ಅವಕಾಶವಿದೆ.
1975 ಮತ್ತು 1979ರಲ್ಲಿ (ಒಂದು ಪಂದ್ಯ ಮಳೆಗೆ ರದ್ದು) ವೆಸ್ಟ್ ಇಂಡೀಸ್ ಹಾಗೂ 2003 ಮತ್ತು 2007ರಲ್ಲಿ ಆಸ್ಟ್ರೆಲಿಯಾ ತಂಡ ಅಜೇಯವಾಗಿ ವಿಶ್ವಕಪ್ ಜಯಿಸಿತ್ತು. 48 ವರ್ಷಗಳ ಇತಿಹಾಸ ಹೊಂದಿರುವ ಏಕದಿನ ವಿಶ್ವಕಪ್ನ ಕಳೆದ 12 ಆವೃತ್ತಿಗಳಲ್ಲಿ ಒಟ್ಟು 5 ತಂಡಗಳು ಪ್ರಶಸ್ತಿ ಗೆದ್ದಿವೆ. ಆದರೆ ಈ ಪೈಕಿ ವಿಂಡೀಸ್, ಆಸೀಸ್ ಬಿಟ್ಟರೆ ಬೇರೆ ತಂಡಗಳು ಅಜೇಯವಾಗಿ ಈ ಸಾಧನೆ ಮಾಡಿಲ್ಲ. ಭಾರತವೂ 1983 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದಾಗ ಲೀಗ್ ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿತ್ತು. 2011ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆದ್ದಾಗ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತ್ತು. ನಂತರ ಭಾರತ 2015ರಲ್ಲಿ ಲೀಗ್ ಹಂತದಲ್ಲಿ 6 ಪಂದ್ಯ ಗೆದ್ದು ಅಜೇಯವಾಗಿಯೇ ಉಳಿದಿದ್ದರೂ, ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ನಿರಾಸೆ ಅನುಭವಿಸಿತ್ತು.