ಕ್ರೀಡೆ

VIDEO | ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಟೀಮ್‌ಗೆ ಸೋಲುಣಿಸಿದ ಚಾಹಲ್ ಟೀಮ್

ದುಬೈ: ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ಆರ್‌ಸಿಬಿ ತಂಡ ಆಂತರಿಕವಾಗಿ ಅಭ್ಯಾಸ ಪಂದ್ಯವನ್ನು ಆಡಿದೆ. ಇದರಲ್ಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಸಾರಥ್ಯದ ತಂಡ ಸೋಲುಣಿಸಿದೆ.

ನಿಧಾನಗತಿಯ ಪಿಚ್ ಮೇಲೆ ನಡೆದ ಪಂದ್ಯದಲ್ಲಿ ಚಾಹಲ್ ತಂಡದ ಪರ ಎಬಿ ಡಿವಿಲಿಯರ್ಸ್‌ ಜತೆಗೆ ಕನ್ನಡಿಗ ದೇವದತ್ ಪಡಿಕಲ್ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದುಕೊಂಡರು. ಡಿವಿಲಿಯರ್ಸ್‌ 33 ಎಸೆತಗಳಲ್ಲಿ 43 ರನ್ ಸಿಡಿಸಿ ಗಮನ ಸೆಳೆದರೆ, ಪಡಿಕಲ್ ಕೂಡ ಕೆಲ ಆಕರ್ಷಕ ಹೊಡೆತಗಳನ್ನು ಬಾರಿಸಿದರು.

ಚಾಹಲ್ ತಂಡ ರನ್ ಗಳಿಸಲು ಕಷ್ಟಕರವಾಗಿದ್ದ ಪಿಚ್‌ನಲ್ಲಿ 125 ರನ್ ಕೂಡಿ ಹಾಕಲು ಆರಂಭಿಕ ಜತೆಯಾಟ ಪ್ರಮುಖ ಪಾತ್ರವಹಿಸಿತು ಎಂದು ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಅಭಿಪ್ರಾಯಪಟ್ಟರು. ಕೊಹ್ಲಿ ತಂಡದ ಪರ ಆಡಿದ ದಕ್ಷಿಣ ಆಫ್ರಿಕಾದ ವೇಗಿ 4 ಓವರ್ ಬೌಲಿಂಗ್ ಮಾಡಿದರು. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೇವಲ 11 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು.

ಪ್ರತಿಯಾಗಿ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ಇನಿಂಗ್ಸ್ ಆರಂಭಿಸಿದರೂ ಕೊಹ್ಲಿ ಟೀಮ್ ಸ್ಪರ್ಧಾತ್ಮಕ ಸವಾಲಿನಿಂದ ಸ್ವಲ್ಪದರಲ್ಲಿಯೇ ಹಿಂದುಳಿಯಿತು. ಎಡಗೈ ಸ್ಪಿನ್ನರ್ ಶಾಜಾಬ್ ಅಹ್ಮದ್ 13 ರನ್‌ಗೆ 3 ವಿಕೆಟ್ ಕಬಳಿಸಿ ಕಡಿವಾಣ ಹಾಕಿದರು.

ಲೀಡರ್‌ಶಿಪ್ ಗ್ರೂಪ್‌ಗೆ ಚಾಹಲ್

ಆರ್‌ಸಿಬಿ ಅಭ್ಯಾಸ ಪಂದ್ಯಗಳಲ್ಲಿ ಚಾಹಲ್ ನಾಯಕರಾಗಿ ಶೇ. 100 ಗೆಲುವಿನ ದಾಖಲೆ ಉಳಿಸಿಕೊಂಡಿದ್ದಾರೆ. ಅವರ ತಂಡ ಸರ್ವಾಂಗೀಣ ನಿರ್ವಹಣೆಯ ಮೂಲಕ ಗಮನ ಸೆಳೆಯಿತು. ಚಾಹಲ್ ಅವರೀಗ ಆರ್‌ಸಿಬಿ ತಂಡದ ಲೀಡರ್‌ಶಿಪ್ ಗ್ರೂಪ್‌ನ ಭಾಗವಾಗಿದ್ದಾರೆ. ಇದರಿಂದಾಗಿಯೇ ಅವರಿಗೆ ಅಭ್ಯಾಸ ಪಂದ್ಯದಲ್ಲಿ ತಂಡವೊಂದನ್ನು ಮುನ್ನಡೆಸುವ ಅವಕಾಶ ನೀಡಲಾಗಿದೆ ಎಂದು ಹೆಸ್ಸನ್ ತಿಳಿಸಿದ್ದಾರೆ.