ಕ್ರೀಡೆ

ಪರಸ್ಪರ ಪ್ಲ್ಯಾಂಕ್ ಚಾಲೆಂಜ್ ಹಾಕಿಕೊಂಡ ಕ್ರಿಕೆಟಿಗರು..!

ಸಿಡ್ನಿ: ಐಪಿಎಲ್ ಮುಕ್ತಾಯಗೊಂಡ ಬಳಿಕ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಿರುವ ಭಾರತ ತಂಡದ ಕ್ರಿಕೆಟಿಗರು, ಸಿಡ್ನಿಯಲ್ಲಿ ಕಠಿಣ ಅಭ್ಯಾಸಕ್ಕೆ ನಡೆಸುತ್ತಿದ್ದಾರೆ. ಕರೊನಾ ವೈರಸ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಶನಿವಾರದಿಂದ ಅಭ್ಯಾಸ ಆರಂಭಿಸಿದರು. ಭಾನುವಾರವೂ ಜಿಮ್‌ನಲ್ಲಿ ಕಸರತ್ತು ನಡೆಸಿದ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸಕ್ಕಿದರು. ಜಿಮ್‌ನಲ್ಲಿ ಕರ್ನಾಟಕದ ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್ ಹಾಗೂ ಯುವ ಕ್ರಿಕೆಟಿಗ ಶುಭಮಾನ್ ಗಿಲ್ ಪರಸ್ಪರ ಪ್ಲ್ಯಾಂಕ್ ಚಾಲೆಂಜ್ ಮಾಡಿಕೊಂಡಿದ್ದು ವಿಶೇಷ.

ಮೊಣಕೈಯನ್ನು ನೆಲಕ್ಕೂರಿ ಕಾಲಿನ ಮುಂಭಾಗದಿಂದ ನೇರವಾಗಿ ನಿಲ್ಲಬೇಕು. ಯಾರು ಹೆಚ್ಚು ಹೊತ್ತು ನಿಲ್ಲುತ್ತಾರೆ ಎಂಬ ಚಾಲೆಂಜ್ ಹಾಕಿಕೊಂಡು ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವ ಫೋಟೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸಿಡ್ನಿ ಒಲಿಂಪಿಕ್ ಪಾರ್ಕ್‌ನಲ್ಲಿರುವ ಬ್ಲಾಕ್‌ಟೌನ್ ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಅಭ್ಯಾಸ ನಡೆಸಿದರು. ರೆಡ್ ಹಾಗೂ ವೈಟ್ ಬಾಲ್‌ನಲ್ಲಿ ಅಭ್ಯಾಸ ನಡೆಸಿದರು. ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ರೆಡ್ ಬಾಲ್‌ನಲ್ಲಿ ಕ್ಯಾಚ್ ಹಿಡಿಯುವ ಅಭ್ಯಾಸ ಮಾಡಿದರೆ, ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಮಿಂಚಿದ್ದ ಟಿ.ನಟರಾಜನ್, ವೈಟ್‌ಬಾಲ್‌ನಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ನಟರಾಜನ್ ಬೌಲಿಂಗ್ ಮಾಡಿದ್ದು ವಿಶೇಷ. ಟೆಸ್ಟ್ ತಂಡದಲ್ಲಿರುವ ಪೂಜಾರ, ಅಜಿಂಕ್ಯಾ ರಹಾನೆ, ಪೃಥ್ವಿ ಷಾ, ಹನುಮ ವಿಹಾರಿ, ರಿಷಭ್ ಪಂತ್, ಆರ್.ಅಶ್ವಿನ್ ಕೇವಲ ರೆಡ್ ಬಾಲ್‌ನಲ್ಲಿ ಅಭ್ಯಾಸ ಮಾಡಿದರು.

ಭಾರತ ತಂಡ ಕ್ವಾರಂಟೈನ್ ಅವಧಿಯಲ್ಲೇ ಅಭ್ಯಾಸ ಮಾಡುತ್ತಿದೆ. ನವೆಂಬರ್ 27 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಡಿಸೆಂಬರ್ 17 ರಿಂದ ಟೆಸ್ಟ್ ಸರಣಿ ನಡೆಯಲಿದ್ದು, ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ.