ಕ್ರೀಡೆ

ಐಪಿಎಲ್​ ನಡುವೆಯೂ ಟೆಸ್ಟ್​ ಕ್ರಿಕೆಟ್​ಗೆ ಸಿದ್ಧತೆ ನಡೆಸಲಿದ್ದಾರೆ ಟೀಮ್​ ಇಂಡಿಯಾ ಆಟಗಾರರು!

ನವದೆಹಲಿ: ಭಾರತ ತಂಡ ಮುಂಬರುವ ಐಪಿಎಲ್​ 18ನೇ ಆವೃತ್ತಿಯ ಬಳಿಕ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಐಪಿಎಲ್​ನಲ್ಲಿ ಎರಡು ತಿಂಗಳ ಕಾಲ ವೈಟ್​ಬಾಲ್​ನಲ್ಲಿ ಆಡಲಿರುವ ಟೀಮ್​ ಇಂಡಿಯಾ ಆಟಗಾರರು ಅದರ ಬೆನ್ನಲ್ಲೇ ರೆಡ್​ ಬಾಲ್​ ಕ್ರಿಕೆಟ್​ಗೆ ಹೊಂದಿಕೊಳ್ಳುವುದು ಕಠಿಣ ಸವಾಲು ಎನಿಸಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಭಾರತ ತಂಡದ ಆಟಗಾರರು ಐಪಿಎಲ್​ ನಡುವೆಯೂ ಟೆಸ್ಟ್​ ಸರಣಿಗೆ ಸಿದ್ಧತೆ ನಡೆಸಲು ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಇದರನ್ವಯ ಐಪಿಎಲ್​ ಟೂರ್ನಿಯ ನಡುವೆಯೂ ಆಟಗಾರರು ಕೆಲ ಸಮಯ ರೆಡ್​ಬಾಲ್​ನಲ್ಲೂ ಅಭ್ಯಾಸ ನಡೆಸಬೇಕೆಂದು ಸೂಚನೆ ನೀಡಲಿದೆ ಎಂದು ವರದಿಯಾಗಿದೆ.

ಐಪಿಎಲ್​ 18ನೇ ಆವೃತ್ತಿ ಮೇ 25ರವರೆಗೂ ನಡೆಯಲಿದ್ದರೆ, ಇಂಗ್ಲೆಂಡ್​ ಪ್ರವಾಸದ ಮೊದಲ ಟೆಸ್ಟ್​ ಪಂದ್ಯ ಜೂನ್​ 20ರಿಂದ ನಡೆಯಲಿದೆ. ಈ ಮೂರೂವರೆ ವಾರಗಳ ಅವಧಿಯಲ್ಲಿ ಆಟಗಾರರು ಸ್ವಲ್ಪ ಸಮಯ ಕುಟುಂಬದೊಂದಿಗೂ ಕಾಲ ಕಳೆಯಬೇಕಾಗುತ್ತದೆ. ಹೀಗಾಗಿ ಐಪಿಎಲ್​ ಸಮಯದಲ್ಲೂ ಆಟಗಾರರು ರೆಡ್​ ಬಾಲ್​ ಕ್ರಿಕೆಟ್​ ಮರೆಯದಿರಲಿ ಎಂದು ಬಿಸಿಸಿಐ ಕಾರ್ಯತಂತ್ರವನ್ನು ರೂಪಿಸಿದೆ.

ಇಂಗ್ಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯ ಸಿದ್ಧತೆಗಾಗಿ ಬಿಸಿಸಿಐ ಇನ್ನೂ ಕೆಲವು ವಿಶೇಷ ಕಾರ್ಯತಂತ್ರಗಳನ್ನು ಸಿದ್ಧಪಡಿಸಿದೆ. ಆದರೆ ಸದ್ಯಕ್ಕೆ ಅವುಗಳನ್ನು ಗೌಪ್ಯವಾಗಿಟ್ಟಿವೆ. ಇಂಗ್ಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯಲ್ಲಿ ಅನುಸರಿಸುವ ಕಾರ್ಯತಂತ್ರಗಳ ಬಗ್ಗೆ ಭಾರತ ತಂಡದ ಮ್ಯಾನೇಜ್​ಮೆಂಟ್​ ಈಗಾಗಲೆ ಮೊದಲ ಹಂತದ ಸಭೆಯನ್ನು ನಡೆಸಿದೆ. ಇದಲ್ಲದೆ ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ನಡುವೆ ದುಬೈನಲ್ಲೂ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಈ ಸಂಬಂಧ ಇನ್ನೊಂದು ಸುತ್ತಿನ ಸಭೆಯೂ ನಡೆಯಲಿದೆ ಎನ್ನಲಾಗಿದೆ.

ಚಾಂಪಿಯನ್ಸ್​ ಟ್ರೋಫಿ ಮಾರ್ಚ್​ 9ರಂದು ಮುಕ್ತಾಯಗೊಂಡರೆ, ನಂತರ ಎರಡು ವಾರಕ್ಕೂ ಕಡಿಮೆ ಅಂತರದಲ್ಲಿ ಅಂದರೆ ಮಾರ್ಚ್​ 22ರಂದು ಐಪಿಎಲ್​ ಶುರುವಾಗಲಿದೆ. ಸಾಮಾನ್ಯವಾಗಿ ಬಿಸಿಸಿಐ, ಐಪಿಎಲ್​ ಸಮಯದಲ್ಲಿ ಆಟಗಾರರ ಮೇಲೆ ಬೇರೆ ಯಾವ ಜವಾಬ್ದಾರಿಯನ್ನೂ ಹೇರುವುದಿಲ್ಲ ಮತ್ತು ಅವರು ತಮ್ಮ ಫ್ರಾಂಚೈಸಿಗಳ ಪರ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಈ ಬಾರಿ ಐಪಿಎಲ್​ ನಡುವೆಯೂ ಆಟಗಾರರಿಗೆ ಪದೇ ಪದೆ ಟೆಸ್ಟ್​ ಸಿದ್ಧತೆಯ ಬಗ್ಗೆ ಎಚ್ಚರಿಸಲಿದೆ.

ಕಳೆದ ಆಸ್ಟ್ರೆಲಿಯಾ ಪ್ರವಾಸದ ಸೋಲು ಒಂದೆಡೆಯಾದರೆ, ಐಪಿಎಲ್​ ಶುರುವಾದ ನಂತರದಲ್ಲಿ ಕೈಗೊಂಡ ಪ್ರತಿ ಇಂಗ್ಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯಲ್ಲೂ ಸೋತಿರುವುದರಿಂದಲೂ ಈ ಬಾರಿ ವಿಶೇಷವಾಗಿ ಎಚ್ಚರಿಕೆ ವಹಿಸಲಾಗಿದೆ. 2011ರ ಇಂಗ್ಲೆಂಡ್​ ಪ್ರವಾಸದಲ್ಲಿ 0-4ರಿಂದ ಸೋತಿದ್ದ ಭಾರತ, 2014ರಲ್ಲಿ ಮತ್ತೆ 1-3ರಿಂದ ಸೋತಿತ್ತು. 2018ರಲ್ಲೂ 1-4ರಿಂದ ಪರಾಭವಗೊಂಡಿತ್ತು. 2021ರ ಪ್ರವಾಸದಲ್ಲಿ ಭಾರತ, ಕರೊನಾ ವೈರಸ್​ ಕಾಡುವ ವೇಳೆ 2-1ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಒಂದು ವರ್ಷದ ಬಳಿಕ ನಡೆದ ಸರಣಿಯ ಕೊನೇ ಪಂದ್ಯದಲ್ಲಿ ಸೋತು, 2&2ರಿಂದ ಸಮಬಲ ಕಂಡಿತ್ತು.