ಕ್ರೀಡೆ

ಪ್ರಧಾನಿ ಭೇಟಿಯಾದ ಟೀಮ್ ಇಂಡಿಯಾ; ತಂಡದ ಹೊಸ ಜೆರ್ಸಿ ರಿವೀಲ್​ ಮಾಡಿದ ಮೊದಲ ಆಟಗಾರ ಇವರೇ!

ನವದೆಹಲಿ: ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್ಸ್​ ಟೀಮ್ ಇಂಡಿಯಾ ಇಂದು (ಜುಲೈ 04) ಬಿಸಿಸಿಐ ಏರ್ಪಡಿಸಿದ್ದ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದಿದೆ. ಗುರುವಾರ ಬೆಳಗ್ಗೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಆಟಗಾರರಿಗೆ ಬಿಸಿಸಿಐ ಅಧಿಕಾರಿಗಳು ಮತ್ತು ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

ಟೀಮ್ ಇಂಡಿಯಾ ಆಟಗಾರರ ಆಗಮನಕ್ಕಾಗಿ ಏರ್​ಪೋರ್ಟ್​ ಬಳಿ ಕಾದು ಕುಳಿತ್ತಿದ್ದ ಅಭಿಮಾನಿಗಳು, ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಾಣಿಸುತ್ತಿದ್ದಂತೆ ಕುಣಿದು, ಜೈಕಾರ ಕೂಗಿದ್ದಾರೆ. ಈ ವೇಳೆ ವಿರಾಟ್​​ ಫ್ಯಾನ್ಸ್​ಗಳತ್ತ ಕೈಬೀಸಿದರೆ, ರೋಹಿತ್ ಟ್ರೋಫಿ ಎತ್ತಿಹಿಡಿದಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಂವಾದಕ್ಕೆ ಮುಂದಾಗುವ ಮುನ್ನ ಭಾರತೀಯ ಆಟಗಾರರಿಗೆ ಹೊಸ ಜೆರ್ಸಿಯನ್ನು ಹಸ್ತಾಂತರಿಸಲಾಯಿತು.

ಟಿ20 ವಿಶ್ವಕಪ್​ ಗೆದ್ದ ಚಾಂಪಿಯನ್ ಪಡೆಗೆ ಎರಡು ಸ್ಟಾರ್​ ಸೇರಿಸಿದ ಹೊಸ ಟೀಮ್ ಇಂಡಿಯಾ ಜೆರ್ಸಿಯನ್ನು ಬಿಸಿಸಿಐ ಆಟಗಾರರಿಗೆ ಹಸ್ತಾಂತರಿಸಿತು. ನೂತನ ಜೆರ್ಸಿ ಧರಿಸಿದ ಹೆಡ್​ ಕೋಚ್ ರಾಹುಲ್ ದ್ರಾವಿಡ್,​ ನಾಯಕ ರೋಹಿತ್ ಶರ್ಮ, ಉಪನಾಯಕ ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಜಸ್ಪೀತ್ ಬುಮ್ರಾ ಸೇರಿದಂತೆ ತಂಡದ ಇತರೆ ಆಟಗಾರರು ಸಂವಾದದಲ್ಲಿ ಉಪಸ್ಥಿತರಿದ್ದರು.

ಡಬಲ್ ಸ್ಟಾರ್​ ಒಳಗೊಂಡ ಹೊಸ ಟೀಮ್ ಇಂಡಿಯಾ ಜೆರ್ಸಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮೊದಲು ಫ್ಯಾನ್ಸ್​​ಗಳ ಮುಂದೆ ಅನಾವರಣಗೊಳಿಸಿದ್ದು, ಭಾರತ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್​. ಫೋಟೋ ನೋಡುತ್ತಿದ್ದಂತೆ ಸಂತಸಪಟ್ಟ ಕ್ರಿಕೆಟ್ ಅಭಿಮಾನಿಗಳು, ಚಾಂಪಿಯನ್​ಗಳಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ,(ಏಜೆನ್ಸೀಸ್).