ಕ್ರೀಡೆ

ಇಂಗ್ಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಸೋಲಿನ ನೋವಿನ ನಡುವೆ RCB ಫ್ಯಾನ್ಸ್​ಗೆ ಖುಷಿಯ ವಿಚಾರ! ಏನದು?

RCB: ಕಳೆದ ವರ್ಷ ನ.24 ಮತ್ತು 25ರಂದು ನಡೆದ ಐಪಿಎಲ್​ ಹರಾಜಿನಲ್ಲಿ ಯುವ​ ಆಟಗಾರರ ಜತೆ ಆಲ್​ರೌಂಡ್​ ಕ್ರಿಕೆಟಿಗರನ್ನೇ ಖರೀದಿಸಿದ ಫ್ರಾಂಚೈಸಿಗಳು, ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್​ನಲ್ಲಿ ಪೈಪೋಟಿ ಕೊಟ್ಟು ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಕರೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 10 ತಂಡಗಳ ಪೈಕಿ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB), ಅಭಿಮಾನಿಗಳ ವ್ಯಾಪಕ ಟೀಕೆ, ಅಸಮಾಧಾನಕ್ಕೆ ಗುರಿಯಾಗಿತ್ತು. ಆದರೆ, ಎರಡನೇ ದಿನದ ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರನ್ನು ನೋಡಿ ಫ್ಯಾನ್ಸ್​ ಕೊಂಚ ನಿರಾಳವಾಗಿದ್ದರು. ಆಯ್ಕೆಗಳು ಉತ್ತಮ ಅನಿಸಿದ್ದೇ ಆದರೂ ಐಪಿಎಲ್​ನಲ್ಲಿ ಹುಬ್ಬೇರಿಸುವ ಪ್ರದರ್ಶನ ನೀಡ್ತಾರಾ? ಎಂಬ ಭರವಸೆ ಫ್ರಾಂಚೈಸಿಯ ಫ್ಯಾನ್ಸ್​ಗಳಿಗಿಲ್ಲ. ಆದರೆ, ನಿನ್ನೆ ನಡೆದ ಇಂಗ್ಲೆಂಡ್​ ಮತ್ತು ಭಾರತ ನಡುವಿನ 3ನೇ ಟಿ20 ಪಂದ್ಯದ ಬಳಿಕ ಈ ಭರವಸೆ ಕೊಂಚ ಗಟ್ಟಿಯಾಗಿದೆ.

ನಿನ್ನೆ (ಜ.28) ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್​ ಮತ್ತು ಭಾರತ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಆಂಗ್ಲರ ಪಡೆ 26 ರನ್​ಗಳ ಅಂತರದಲ್ಲಿ ಜಯ ಸಾಧಿಸಿತು. 2-1 ಅಂತರದಲ್ಲಿ ಸಾಗಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೂರನೇ ಮ್ಯಾಚ್ ಗೆಲುವು​ ಇಂಗ್ಲೆಂಡ್ ಪಾಲಾಯಿತು. ಈ ಪಂದ್ಯದಲ್ಲಿ ಭಾರತ ಸೋಲುಂಡಿತು ಎಂಬ ಬೇಸರ ಒಂದೆಡೆಯಾದರೆ, ಅದೇ ಮ್ಯಾಚ್​ನಲ್ಲಿ ಆರ್​ಸಿಬಿ ಖರೀದಿಸಿದ ಸ್ಟಾರ್​ ಆಲ್​ರೌಂಡರ್​ ಲಿಯಾಮ್​ ಲಿವಿಂಗ್​ಸ್ಟೋನ್​ರ​ ಅಬ್ಬರದ ಆಟ ಮತ್ತೊಂದೆಡೆ. ಸದ್ಯ ಇದು ಅಭಿಮಾನಿಗಳ ಈ ಸಲ ಕಪ್​ ನಮ್ದೇ ಎನ್ನುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಮೂರನೇ ಟಿ20 ಪಂದ್ಯದಲ್ಲಿ ಭಾರತದ ಎದುರು ತನ್ನ ಬ್ಯಾಟಿಂಗ್​ ಕೌಶಲ್ಯ ಪ್ರದರ್ಶಿಸಿದ ಲಿವಿಂಗ್​​ಸ್ಟೋನ್​, ಕೇವಲ 24 ಎಸೆತಗಳಲ್ಲಿ 43 ರನ್​ಗಳನ್ನು (4 ಸಿಕ್ಸರ್​ ಮತ್ತು 1 ಬೌಂಡರಿ ) ಸಿಡಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಲಿವಿಂಗ್​ಸ್ಟೋನ್​ ಬ್ಯಾಟಿಂಗ್ ವೈಖರಿಯನ್ನು ಗಮನಿಸಿದ ಕ್ರಿಕೆಟ್​ ಪ್ರೇಮಿಗಳು, ಈ ಬಾರಿಯ ಐಪಿಎಲ್​ 18ನೇ ಆವೃತ್ತಿಯಲ್ಲಿಯೂ ಇದೇ ರೀತಿಯ ಸಖತ್​ ಪ್ರದರ್ಶನ ನೀಡುತ್ತಾರೆ ಎಂಬ ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ. 8.75 ಕೋಟಿ ರೂ. ಕೊಟ್ಟು ಖರೀದಿ ಮಾಡಿರುವ ಆರ್​ಸಿಬಿಗೆ ಲಿಯಾಮ್ ಲಿವಿಂಗ್‌ಸ್ಟೋನ್ ವರವಾಗಲಿದ್ದಾರಾ? ಈ ಸಲ ಕಪ್​ ನಮ್ದೇ ಎಂದು ಹೇಳಲು ಅತ್ಯುತ್ತಮ ಕೊಡುಗೆ ನೀಡಲಿದ್ದಾರಾ? ಎಂಬ ಪ್ರಶ್ನೆಗಳಿಗೆ ಮಾರ್ಚ್​ 21ರ ನಂತರದಲ್ಲಿ ಉತ್ತರ ಕಂಡುಕೊಳ್ಳಬೇಕಿದೆ.

RCB ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ

1. ಲಿಯಾಮ್ ಲಿವಿಂಗ್‌ಸ್ಟೋನ್: 8.75 ಕೋಟಿ ರೂ.

2. ಫಿಲ್ ಸಾಲ್ಟ್ – 11.50 ಕೋಟಿ ರೂ.

3. ಜಿತೇಶ್ ಶರ್ಮಾ – 11 ಕೋಟಿ ರೂ.

4. ಜೋಶ್ ಹ್ಯಾಜಲ್‌ವುಡ್ – 12.5 ಕೋಟಿ ರೂ.

5. ರಾಸಿಖ್ ದಾರ್ – 6 ಕೋಟಿ ರೂ.

6. ಸುಯಶ್ ಶರ್ಮಾ – 2.6 ಕೋಟಿ ರೂ.

7. ಕೃನಾಲ್ ಪಾಂಡ್ಯ – 5.75 ಕೋಟಿ ರೂ.

8. ಭುವನೇಶ್ವರ್ ಕುಮಾರ್ – 10.75 ಕೋಟಿ ರೂ.

9. ಸ್ವಪ್ನಿಲ್ ಸಿಂಗ್: 50 ಲಕ್ಷ ರೂ.

10. ಟಿಮ್ ಡೇವಿಡ್: 3 ಕೋಟಿ ರೂ.

11. ರೊಮಾರಿಯೋ ಶೆಫರ್ಡ್: 1.50 ಕೋಟಿ ರೂ.

12. ನುವಾನ್ ತುಷಾರ: 1.60 ಕೋಟಿ ರೂ.

13. ಜಾಕೋಬ್ ಬೆಥೆಲ್: 2.60 ಕೋಟಿ ರೂ.

14. ದೇವದತ್ ಪಡಿಕ್ಕಲ್: 2 ಕೋಟಿ ರೂ.

15. ಸ್ವಸ್ತಿಕ್ ಚಿಕಾರ: 30 ಲಕ್ಷ ರೂ.