ಕ್ರೀಡೆ

ಟೀಮ್ ಇಂಡಿಯಾ ಲಾಕ್​ಡೌನ್! ಬಿಡುವಿಲ್ಲದೆ ಆಡುತ್ತಿದ್ದ ಸ್ಟಾರ್ ಕ್ರಿಕೆಟಿಗರು ಈಗ ಮನೆಯಲ್ಲೇ ಲಾಕ್, ಟೈಂಪಾಸ್​ಗೆ ಪರದಾಟ

vinaymk1969

ಕರೊನಾ ವಿರುದ್ಧ ಹೋರಾಡಲು ಇಡೀ ದೇಶ ಲಾಕ್​ಡೌನ್ ಮೂಲಕ ಒಗ್ಗಟ್ಟಾಗಿದ್ದು, ಮಹಾಮಾರಿಯನ್ನು ಓಡಿಸಲು ‘ಟೀಮ್ ಇಂಡಿಯಾ’ ರೀತಿ ಸಂಘಟಿತ ಪ್ರಯತ್ನದಲ್ಲಿದೆ. ಇತ್ತ, ನಿರಂತರವಾಗಿ ಕ್ರಿಕೆಟ್ ಆಡುತ್ತ ಬಿಡುವಿಲ್ಲದೆ ಇರುತ್ತಿದ್ದ ಟೀಮ್ ಇಂಡಿಯಾ ಆಟಗಾರರು ಈಗ ಟೈಂಪಾಸ್ ಮಾಡಲು ಪರದಾಡುತ್ತಿದ್ದಾರೆ. ಎಲ್ಲರಂತೆ ಟೀಮ್ ಇಂಡಿಯಾ ಆಟಗಾರರೂ ಸ್ವಯಂ ದಿಗ್ಬಂಧನದಲ್ಲಿ ಸಿಲುಕಿದ್ದು, ಮನೆಯಲ್ಲಿ ಯಾವ ರೀತಿ ಅವರು ಕಾಲ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಿಂದ ಲಭಿಸಿದ ಮಾಹಿತಿಯ ಸಂಕ್ಷಿಪ್ತ ವಿವರ ಇಲ್ಲಿದೆ.

ಕೊಹ್ಲಿಗೆ ಮನೆಯಲ್ಲೇ ಹೇರ್​ಕಟ್

ಪತ್ನಿ ಅನುಷ್ಕಾ ಶರ್ಮ ಮತ್ತು ಅತ್ತೆ-ಮಾವನೊಂದಿಗೆ ಮುಂಬೈನ ಮನೆಯಲ್ಲಿ ದಿಗ್ಬಂಧನದಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಮಯ ಕಳೆಯುವುದಕ್ಕಾಗಿ ಲುಡೋ, ಕಾರ್ಡ್ ಗೇಮ್ ಮುಂತಾದ ಚಟುವಟಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಕೆವಿನ್ ಪೀಟರ್ಸೆನ್ ಮತ್ತು ಎಬಿ ಡಿವಿಲಿಯರ್ಸ್ ಜತೆಗಿನ ಇನ್​ಸ್ಟಾಗ್ರಾಂ ಲೈವ್ ಕಾರ್ಯಕ್ರಮಗಳ ಮೂಲಕ ತಮ್ಮ ಅನುಭವ, ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದಾರೆ. ಇನ್ನು ಮನೆಯಲ್ಲೇ ಪತ್ನಿಯಿಂದ ಹೇರ್​ಕಟ್ ಕೂಡ ಮಾಡಿಸಿಕೊಂಡಿರುವ ಕೊಹ್ಲಿ, ಗಡ್ಡವೂ ಈಗ ಟ್ರಿಮ್ ಆಗಿದೆ.

ರೋಹಿತ್ ಜಾಗೃತಿ ಸಂದೇಶ

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬ ಜಾಗೃತಿಯ ಸಂದೇಶಗಳನ್ನು ಟ್ವಿಟರ್​ನಲ್ಲಿ ಹಂಚುತ್ತಿರುವ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ, ಮುಂಬೈ ಪೊಲೀಸರ ಶ್ರಮವನ್ನೂ ಇತ್ತೀಚೆಗೆ ಪ್ರಶಂಸಿಸಿದ್ದರು. ಹರ್ಭಜನ್ ಸಿಂಗ್ ಜತೆ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಮಾತನಾಡಿದ್ದ ರೋಹಿತ್, ಮುಂದಿನ 3 ವಿಶ್ವಕಪ್​ಗಳಲ್ಲಿ ಭಾರತ ಕನಿಷ್ಠ ಎರಡರಲ್ಲಾದರೂ ಗೆಲ್ಲಬೇಕು ಎಂದಿದ್ದರು.

ಮನೆ ಸ್ವಚ್ಛತೆಯಲ್ಲಿ ಪೂಜಾರ

ಪತ್ನಿ, ಮಗಳೊಂದಿಗೆ ಸಮಯ ಕಳೆಯುತ್ತಿರುವ ಚಿತ್ರದೊಂದಿಗೆ ಮನೆಯಲ್ಲೇ ಇರಿ ಎಂಬ ಜಾಗೃತಿ ಮೂಡಿಸುತ್ತಿರುವ ಟೆಸ್ಟ್ ತಜ್ಞ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ, ವ್ಯಾಕ್ಯುಂ ಕ್ಲೀನರ್​ನಿಂದ ಮನೆ ಸ್ವಚ್ಛಮಾಡುತ್ತಿರುವ ಚಿತ್ರವನ್ನೂ ಪ್ರಕಟಿಸಿದ್ದರು. ಲಾಕ್​ಡೌನ್​ಗೆ ಮುನ್ನ ನಿಶ್ಚಿತಾರ್ಥ ಮಾಡಿಕೊಂಡ ಸೌರಾಷ್ಟ್ರದ ಸಹ-ಆಟಗಾರ ಜೈದೇವ್ ಉನಾದ್ಕತ್ ತರಕಾರಿ ಕತ್ತರಿಸುವ ಚಿತ್ರ ಪ್ರಕಟಿಸಿದಾಗ, ’ಮದುವೆಯ ನಂತರದ ಜೀವನಕ್ಕೆ ಸಿದ್ಧವಾಗುತ್ತಿರುವೆಯಾ?’ ಎಂಬ ಕಮೆಂಟ್​ನೊಂದಿಗೆ ಕಾಲೆಳೆದಿದ್ದರು.

ಮಗಳ ಜತೆ ಧೋನಿ ಬೈಕ್ ರೈಡ್

ಅಧಿಕೃತವಾಗಿ ನಿವೃತ್ತಿಯಾಗದ ಕಾರಣ ಮಾಜಿ ನಾಯಕ ಎಂಎಸ್ ಧೋನಿ ಈಗಲೂ ಟೀಮ್ ಇಂಡಿಯಾ ಆಟಗಾರ. ಕಳೆದ ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡದ ಧೋನಿ, ಐಪಿಎಲ್​ನಲ್ಲಿ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದರು. ಈಗ ಕರೊನಾದಿಂದಾಗಿ ರಾಂಚಿಯ ಐಷಾರಾಮಿ ಫಾಮ್ರ್ ಹೌಸ್​ನಲ್ಲಿ ಲಾಕ್ ಆಗಿದ್ದಾರೆ. ಮಗಳು ಝೀವಾ ಜತೆಗೆ ಮನೆ ಆವರಣದಲ್ಲೇ ಬೈಕ್ ರೈಡ್ ಮಾಡುತ್ತಿರುತ್ತಾರೆ. ಧೋನಿ ತಮಗಿಂತ ವಿಡಿಯೋ ಗೇಮ್ೆ ಹೆಚ್ಚಿನ ಸಮಯ ನೀಡುತ್ತಾರೆ ಎಂದು ಪತ್ನಿ ಸಾಕ್ಷಿ ಇತ್ತೀಚೆಗೆ ಹುಸಿಕೋಪ ವ್ಯಕ್ತಪಡಿಸಿದ್ದರು.

ಮಯಾಂಕ್ ಅಡುಗೆ ಆಸಕ್ತಿ

ಬೆಂಗಳೂರಿನ ಮನೆಯಲ್ಲಿ ಲಾಕ್ ಆಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್, ಅವಿಭಕ್ತ ಕುಟುಂಬದ ಸದಸ್ಯರೊಂದಿಗೆ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಜತೆಗೆ ಎಲ್ಲರೂ ಒಟ್ಟಾಗಿ ಕಾರ್ಡ್ ಗೇಮ್ಳನ್ನೂ ಆಡುತ್ತಿದ್ದಾರೆ. ಪುಸ್ತಕ ಓದುವುದಕ್ಕೆ ಆದ್ಯತೆ ನೀಡುತ್ತಿರುವ ಮಯಾಂಕ್, ಅಡುಗೆ ಮಾಡುವ ಆಸಕ್ತಿಯನ್ನೂ ತೋರಿದ್ದಾರೆ. ವರ್ಕೌಟ್ ವೇಳೆ ಪತ್ನಿ ಆಶಿತಾ ಕೂಡ ಸಾಥ್ ನೀಡುತ್ತಿದ್ದಾರೆ.

ಮಗನ ಜತೆ ಧವನ್ ಆಟ

ಮಗನೊಂದಿಗೆ ತುಂಟಾಟವಾಡುತ್ತ ಸಮಯ ಕಳೆಯುತ್ತಿರುವ ಎಡಗೈ ಆರಂಭಿಕ ಶಿಖರ್ ಧವನ್, ಆಗಾಗ ಯುವ ಕ್ರಿಕೆಟಿಗರಿಗೆ ಕೆಲವೊಂದು ಟಿಪ್ಸ್​ಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಬೀದಿ ನಾಯಿಗಳಿಗೆ ಆಹಾರ ಹಂಚುವವರನ್ನು ಮೆಚ್ಚಿದ್ದ ಧವನ್, ಲಾಕ್​ಡೌನ್​ನಿಂದ ಕೌಟುಂಬಿಕ ದೌರ್ಜನ್ಯ ಹೆಚ್ಚಾಗಿರುವುದನ್ನು ಖಂಡಿಸಿದ್ದರು.

ಕೆಎಲ್ ರಾಹುಲ್ ಲುಡೊ ಕಿಂಗ್

ಮೊದಲೇ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಸುದ್ದಿಯಾಗುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್ ಈಗ ಇನ್ನಷ್ಟು ಹೆಚ್ಚು ಇದರಲ್ಲೇ ಸಮಯ ಕಳೆಯುತ್ತಿದ್ದಾರೆ. ನೆಚ್ಚಿನ ನಾಯಿ ಜತೆಗೂ ತುಂಟಾಟ ವಾಡುತ್ತಿದ್ದು, ಗೆಳತಿ ಅತಿಯಾ ಶೆಟ್ಟಿ ಜತೆಗಿನ ಆನ್​ಲೈನ್ ಲುಡೊ ಆಟದಲ್ಲಿ ಗೆದ್ದಿರುವ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದರು. ವಿಶ್ವಕಪ್ ಬ್ಯಾಟ್ ಹರಾಜಿನಿಂದ ಬಂದ 2.64 ಲಕ್ಷ ರೂ.ಗಳನ್ನು ಬಡಮಕ್ಕಳ ಕಲ್ಯಾಣಕ್ಕೆ ನೀಡಿದ್ದರು. 28ನೇ ಜನ್ಮದಿನಕ್ಕೆ ಶುಭಹಾರೈಸಿದವರಿಗೂ ಧನ್ಯವಾದ ಸಮರ್ಪಿಸಿದ್ದರು.

ಹಾರ್ದಿಕ್ ಪಾಂಡ್ಯ ಮನೆಯಲ್ಲೇ ಆಟ

ಅಣ್ಣ ಕೃನಾಲ್ ಪಾಂಡ್ಯ, ಅತ್ತಿಗೆ ಪಂಕುರಿ ಮತ್ತು ಭಾವಿ ಪತ್ನಿ ನತಾಶಾ ಸ್ಟಾಂಕೋವಿಕ್ ಜತೆಗೆ ಗೃಹಬಂಧನದಲ್ಲಿರುವ ಹಾರ್ದಿಕ್ ಪಾಂಡ್ಯ, ಮನೆಯವರೆಲ್ಲರೂ ಒಟ್ಟಾಗಿ ವರ್ಕೌಟ್ ಮಾಡುತ್ತಿರುವ ಚಿತ್ರ ಪ್ರಕಟಿಸಿದ್ದರು. ಇನ್ನು ಅಣ್ಣ-ತಮ್ಮ ಮನೆಯೊಳಗೇ ಕ್ರಿಕೆಟ್, ಟೇಬಲ್ ಟೆನಿಸ್ ಆಡುತ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದರು.

ಶಮಿ ಚಿತ್ರ ಕಲಾವಿದ

ತಮ್ಮ ಮನೆಯ ಹೊರಗೆ ಹಸಿವಿನಿಂದ ಬಳಲುತ್ತಿದ್ದ ವಲಸೆ ಕಾರ್ವಿುಕನೊಬ್ಬನಿಗೆ ಆಹಾರ ನೀಡಿ ನೆರವಾಗಿರುವುದನ್ನು ಹೇಳಿಕೊಂಡಿರುವ ವೇಗಿ ಮೊಹಮದ್ ಶಮಿ, ಪೆನ್ಸಿಲ್​ನಲ್ಲಿ ಚಿತ್ರ ಬಿಡಿಸುತ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದರು. ಅಮ್ರೋಹಾದ ಮನೆಯಲ್ಲಿರುವ ಶಮಿ, ಸಹೋದರನ ಮಗಳ ಜತೆ ಆಡುವ ಮೂಲಕವೂ ಸಮಯ ಕಳೆಯುತ್ತಿದ್ದಾರೆ.

ಚಾಹಲ್ ಚೆಸ್ ಪ್ಲೇಯರ್, ಟಿಕ್​ಟಾಕ್ ಸ್ಟಾರ್

ತಂದೆ, ತಾಯಿ, ಅಕ್ಕನ ಜತೆಗಿನ ಟಿಕ್​ಟಾಕ್ ವಿಡಿಯೊಗಳಿಂದ ಗಮನ ಸೆಳೆಯುತ್ತಿರುವ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್, ಬಾಲ್ಯದ ನೆಚ್ಚಿನ ಚೆಸ್ ಆಟವನ್ನು ಆನ್​ಲೈನ್​ನಲ್ಲಿ ಆಡುವುದರಲ್ಲೂ ಸಮಯ ಕಳೆಯುತ್ತಿದ್ದಾರೆ. ಇದರಿಂದ ಕರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆಯನ್ನೂ ಸಂಗ್ರಹಿಸಿದ್ದರು.

ಅಶ್ವಿನ್ ಹೆಸರು ಬದಲು

‘ಒಳಾಂಗಣದಲ್ಲೇ ಇರೋಣ ಭಾರತ’ ಎಂದು ತನ್ನ ಟ್ವಿಟರ್ ಖಾತೆಯ ಹೆಸರನ್ನೇ ಬದಲಾಯಿಸಿಕೊಂಡಿರುವ ಆಫ್ ಸ್ಪಿನ್ನರ್ ಆರ್. ಅಶ್ವಿನ್, ಅಭಿಮಾನಿ ಗಳೊಂದಿಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳುತ್ತಿರುತ್ತಾರೆ.

ಅಮ್ಮನಿಗೆ ನೆರವಾಗುತ್ತಿರುವ ಬುಮ್ರಾ

ಮನೆ ಸ್ವಚ್ಛತೆ ಕೆಲಸದಲ್ಲಿ ಅಮ್ಮನಿಗೆ ನೆರವಾಗುತ್ತಿರುವ ವಿಶ್ವ ನಂ. 1 ವೇಗಿ ಜಸ್​ಪ್ರೀತ್ ಬುಮ್ರಾ, ಗಿಡಗಳಿಗೆ ನೀರು ಹಾಕುವ ಕೆಲಸವನ್ನೂ ಅಷ್ಟೇ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಇನ್​ಸ್ಟಾಗ್ರಾಂ ಲೈವ್​ನಲ್ಲಿ ಯುವರಾಜ್ ಸಿಂಗ್ ಜತೆಗೆ ಮಾತುಕತೆಯ ವೇಳೆ ಹಳೆಯ ಅನುಭವಗಳನ್ನು ನೆನಪಿಸಿಕೊಂಡಿರುವ ಬುಮ್ರಾ, ‘ನಾನು ಹೆಚ್ಚು ಕಾಲ ಆಡಲಾರೆ, ಒಂದೆರಡು ರಣಜಿ ಪಂದ್ಯದಲ್ಲಷ್ಟೇ ಕಾಣಿಸಿಕೊಳ್ಳಬಹುದು ಎಂದು ಹೆಚ್ಚಿನವರು ಹೇಳಿದ್ದರು’ ಎಂದಿದ್ದಾರೆ.

ರವೀಂದ್ರ ಜಡೇಜಾ ಕತ್ತಿವರಸೆ

ಮೈದಾನದಲ್ಲಿ ಸಂಭ್ರಮ ಆಚರಿಸುವ ವೇಳೆ ಬ್ಯಾಟ್​ನಿಂದಲೇ ಕತ್ತಿವರಸೆ ಪ್ರದರ್ಶಿಸುತ್ತಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ, ಈಗ ನಿಜವಾದ ಖಡ್ಗದಿಂದಲೇ ಕತ್ತಿವರಸೆ ಕೌಶಲ ಪ್ರದರ್ಶಿಸುವ ವಿಡಿಯೊವನ್ನು ಹಂಚಿಕೊಂಡು ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಅಜಿಂಕ್ಯ ರಹಾನೆ ಪುಸ್ತಕ ಪ್ರೀತಿ

ಪುಸ್ತಕ ಓದುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ಮುಂಬೈ ಬ್ಯಾಟ್ಸ್​ಮನ್ ಅಜಿಂಕ್ಯ ರಹಾನೆ, ಆಗಾಗ ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರಿಸುತ್ತಿರುತ್ತಾರೆ. ಬೆಳಗ್ಗೆ 5 ಗಂಟೆಗೆ ಎದ್ದು ವರ್ಕೌಟ್ ಮಾಡುತ್ತೇನೆ. ಬಳಿಕ ಪತ್ನಿ ರಾಧಿಕಾಗೆ ಮನೆಗೆಲಸದಲ್ಲಿ ನೆರವಾಗುತ್ತೇನೆ. ಮಗಳು ಆರ್ಯಾ ಜತೆ ಆಡುತ್ತೇನೆ. ಹೆತ್ತವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತೇನೆ. ಕೆಲವೊಮ್ಮೆ ಅಡುಗೆಯನ್ನೂ ಮಾಡುತ್ತೇನೆ ಎಂದು ರಹಾನೆ ಹೇಳಿಕೊಂಡಿದ್ದರು.