ಕ್ರೀಡೆ

5-0 ಅಂತರದಲ್ಲಿ ಟಿ20 ಸರಣಿಯನ್ನು ತೆಕ್ಕೆಗೆಳೆದುಕೊಂಡ ಭಾರತ; ಸಂಪೂರ್ಣ ಶರಣಾದ ಕಿವೀಸ್​

ಮೌಂಟ್​ವೌಂಗನುಯಿ: ಇಲ್ಲಿನ ಬೇ ಓವಲ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ 7 ರನ್​ಗಳಿಂದ ನ್ಯೂಜಿಲೆಂಡ್​ ವಿರುದ್ಧ ಗೆಲುವು ಸಾಧಿಸಿದೆ.

ಈ ಗೆಲುವಿನೊಂದಿಗೆ ಭಾರತ ಹೆಗ್ಗಳಿಕೆಯೊಂದಕ್ಕೆ ಪಾತ್ರವಾಗಿದೆ. 5-0 ಅಂತರಲ್ಲಿ ಟಿ-20 ಸರಣಿ ಗೆದ್ದ ಮೊದಲ ತಂಡ ಎಂಬ ಇತಿಹಾಸವನ್ನು ಬರೆದಿದೆ. ಅದೂ ನ್ಯೂಜಿಲೆಂಡ್​ ನೆಲದಲ್ಲೇ ಆ ದೇಶವನ್ನು ಬಗ್ಗು ಬಡಿಯುವ ಮೂಲಕ ಇನ್ನಷ್ಟು ಹೆಮ್ಮೆಗೆ ಪಾತ್ರವಾಗಿದೆ. ಮೊದಲ ಮೂರು ಪಂದ್ಯಗಳನ್ನು ಭಾರತ ಗೆದ್ದಾಗಲೇ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಉಳಿದ ಎರಡು ಪಂದ್ಯಗಳಲ್ಲೂ ಸಹ ನ್ಯೂಜಿಲೆಂಡ್​ನ್ನು ಸೋಲಿಸಿ ಕ್ಲೀನ್​ ಸ್ವೀಪ್​ ಮಾಡಿತು.

ಇಂದು ಮೊದಲು ಬ್ಯಾಟ್ ಮಾಡಿದ ಭಾರತ ಬರೀ 3 ವಿಕೆಟ್​ಗಳ ನಷ್ಟಕ್ಕೆ 163 ರನ್​ಗಳಿಸಿತ್ತು. ರೋಹಿತ್​ ಶರ್ಮಾ (60*) ತಂಡದ ರನ್​ ಜಾಸ್ತಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ನೀಡಿದ 164ರನ್​ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 156 ರನ್​ಗೆ ತನ್ನೆಲ್ಲ ವಿಕೆಟ್​ಗಳನ್ನೂ ಕಳೆದುಕೊಂಡಿತು. ಭಾರತದ ಪರ ಜಸ್ಪ್ರೀತ್​ ಬುಮ್ರಾ 3 ವಿಕೆಟ್​ ಪಡೆದರು. ಶಾರ್ದೂಲ್​ ಠಾಕೂರ್ ಹಾಗೂ ನವದೀಪ್​ ಸೈನಿ ತಲಾ 2 ವಿಕೆಟ್​ಗಳು ಮತ್ತು ವಾಷಿಂಗ್ಟನ್​ ಸುಂದರ್​ ಒಂದು ವಿಕೆಟ್​ ಪಡೆದರು.

ನ್ಯೂಜಿಲೆಂಡ್​ ಪರ ರೋಸ್​ ಟೇಲರ್​ (53) ಮತ್ತು ಟಿಮ್ ಸೈಫರ್ಟ್​ (50) ಇಬ್ಬರು ಅರ್ಧಶತಕ ಬಾರಿಸಿದ್ದು ಬಿಟ್ಟರೆ ಇನ್ಯಾರೂ ಉತ್ತಮ ಸ್ಕೋರ್​ ಮಾಡಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್​)