ಹಾಲಿ ಚಾಂಪಿಯನ್ಗಳಾದ ಅಭಿಷೇಕ್, ಸಂಜೀವಿನಿ ಕಣಕ್ಕೆ
ಬೆಂಗಳೂರು: ಏಪ್ರಿಲ್ 26ರ ಭಾನುವಾರದಂದು ನಡೆಯಲಿರುವ 18ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಬೆಂಗಳೂರು (TCS World 10k Bengaluru 2026) ಓಟದಲ್ಲಿ ಮೈದಾನ ಮತ್ತು ವರ್ಚುವಲ್ ಮೂಲಕ ದಾಖಲೆಯ 35 ಸಾವಿರಕ್ಕೂ ಅಧಿಕ ಓಟಗಾರರು ಪಾಲ್ಗೊಳ್ಳಲಿದ್ದಾರೆ. ಭಾರತೀಯ ವಿಭಾಗದ ಹಾಲಿ ಚಾಂಪಿಯನ್ಗಳಾದ ಅಭಿಷೇಕ್ ಪಾಲ್ ಮತ್ತು ಸಂಜೀವಿನಿ ಜಾಧವ್ ಈ ಬಾರಿಯೂ ಕಣದಲ್ಲಿದ್ದಾರೆ. ಕೂಟದ ಫಿನಿಶರ್ ಟಿ-ಶರ್ಟ್ಅನ್ನು ಭಾರತೀಯ ಹಾಕಿ ತಾರೆ ಜರ್ಮನ್ಪ್ರೀತ್ ಸಿಂಗ್ ಶನಿವಾರ ಅನಾವರಣಗೊಳಿಸಿದರು.
ಒಟ್ಟು 1.94 ಕೋಟಿ ರೂ. ಬಹುಮಾನ ಮೊತ್ತದ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೇಸ್ನಲ್ಲಿ ಉಗಾಂಡದ ಹಾರ್ರ್ಬಟ್ ಕಿಬೆಟ್ ಮತ್ತು ಎಲೈಟ್ ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಸಾರಾ ಚಿಲಂಗಟ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಓಟದ ಫ್ಲ್ಯಾಗ್ ಆನ್ ಕಬ್ಬನ್ ರಸ್ತೆಯಲ್ಲಿ ನಡೆಯಲಿದೆ. ಮಾಜಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ಸ್ ಪದಕ ವಿಜೇತೆ ಬ್ಲಾಂಕಾ ವ್ಲಾಸಿಕ್ ಕೂಟದ ಪ್ರಚಾರ ರಾಯಭಾರಿಯಾಗಿದ್ದಾರೆ.
"ಟಿಸಿಎಸ್ ವಿಶ್ವ 10ಕೆ ಒಂದು ರೇಸ್ಗಿಂತ ಹೆಚ್ಚಿನದಾಗಿದೆ. ಇದು ಜನರು ಒಗ್ಗೂಡಿದಾಗ ಏನನ್ನು ಸಾಧಿಸಲು ಸಾಧ್ಯ ಎಂದು ತೋರಿಸುವ ಓಟವಾಗಿದೆ. ಪ್ರತಿ ಆವೃತ್ತಿಯೂ ಆರೋಗ್ಯಕರವಾಗಿ ಬದಕಲು ಮತ್ತು ಉನ್ನತ ಗುರಿಯ ಸ್ಫೂರ್ತಿಯನ್ನು ನೀಡುತ್ತದೆ' ಎಂದು ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನೀಲ್ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.