ಕ್ರೀಡೆ

ಆಫ್ಘಾನ್-ಆಸಿಸ್​ ಟೆಸ್ಟ್​ ಪಂದ್ಯಕ್ಕೆ ಹಸಿರು ನಿಶಾನೆ: ಕ್ರಿಕೆಟ್​ ವಿಚಾರದಲ್ಲಿ ಹಸ್ತಕ್ಷೇಪ ಇಲ್ಲವೆಂದ ತಾಲಿಬಾನ್!

ಕಾಬುಲ್​: ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಮರಳಿದ ಬಳಿಕ ಇಡೀ ಆಫ್ಘಾನ್​ ಇದೀಗ ತಾಲಿಬಾನಿಗಳ ಕೈವಶದಲ್ಲಿದೆ. ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್​ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಉಗ್ರರ ಆಳ್ವಿಕೆಯಲ್ಲಿ ಹೇಗಪ್ಪಾ ಜೀವನ ಅಂದುಕೊಳ್ಳುತ್ತಿರುವ ನಡುವೆಯೇ ಆಫ್ಘಾನ್​ ಕ್ರಿಕೆಟ್​ಗೆ ತಾಲಿಬಾನಿಗಳು ಹಸಿರು ನಿಶಾನೆ ತೋರಿರುವುದು ಅಚ್ಚರಿ ಮೂಡಿಸಿದೆ.

ಆಗಸ್ಟ್​ 15ರ ಕಾಬುಲ್​ ಆಕ್ರಮಣದ ನಂತರ ಅಫ್ಘಾನಿಸ್ತಾನದ ಮೊದಲ ಟೆಸ್ಟ್​ ಪಂದ್ಯಕ್ಕೆ ತಾಲಿಬಾನ್​ ಅನುಮೋದನೆ ನೀಡಿದ್ದು, ಆಫ್ಘಾನ್​ ಕ್ರಿಕೆಟ್​ ಮಂಡಳಿ ಈ ವಿಚಾರವನ್ನು ಖಚಿತಪಡಿಸಿದೆ.

ಇದೇ ಸೆಪ್ಟೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನ್​ ಟೆಸ್ಟ್​ ಪಂದ್ಯ ನಡೆಯಲಿದೆ. ಪಂದ್ಯವು ಚೆನ್ನಾಗಿ ನಡೆಯಲಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಕೂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಆಫ್ಘಾನ್​ ಕ್ರಿಕೆಟ್​ ತಂಡ ಒಳ್ಳೆಯ ಯಶಸ್ಸು ಸಾಧಿಸುತ್ತಿದ್ದು, ಆಫ್ಘಾನ್ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ತಾಲಿಬಾನ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ. ಆದರೆ, ಮಹಿಳಾ ಕ್ರಿಕೆಟ್ ಕಾರ್ಯಕ್ರಮಗಳ ಭವಿಷ್ಯವು ಅಸ್ಪಷ್ಟವಾಗಿದೆ. (ಏಜೆನ್ಸೀಸ್​)