ಬೆಂಗಳೂರು: ಟಿ20 ವಿಶ್ವಕಪ್ ಮೊದಲ ಸುತ್ತು ಮುಕ್ತಾಯಗೊಂಡು ಪ್ರಧಾನ ಸುತ್ತು ಸೂಪರ್-12ರಲ್ಲಿ ಅಗ್ರ 12 ತಂಡಗಳು 2 ಗುಂಪುಗಳಲ್ಲಿ ವಿಂಗಡನೆಗೊಂಡಿವೆ. ಈ ಪೈಕಿ ಒಂದನೇ ಗುಂಪು ಟೆಸ್ಟ್ ಮಾನ್ಯತೆ ಹೊಂದಿರುವ 6 ಬಲಾಢ್ಯ ತಂಡಗಳಿಂದ ತುಂಬಿದೆ. ಹೀಗಾಗಿ ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಒಳಗೊಂಡ ಒಂದನೇ ಗುಂಪು ‘ಗ್ರೂಪ್ ಆಫ್ ಡೆತ್’ ಎಂದೇ ಗುರುತಿಸಲ್ಪಟ್ಟಿದೆ. ಗುಂಪಿನಿಂದ 2 ತಂಡಗಳಿಗಷ್ಟೇ ಸೆಮಿಫೈನಲ್‌ಗೇರಲು ಅವಕಾಶವಿರುವುದರಿಂದ ಪ್ರತಿ ಪಂದ್ಯವೂ ನಿರ್ಣಾಯಕವಾಗಿರಲಿದೆ. ಗುಂಪಿನ ಯಾವುದೇ ಪಂದ್ಯವನ್ನೂ ಲಘುವಾಗಿ ಪರಿಗಣಿಸಲು ಅವಕಾಶವಿರುವುದಿಲ್ಲ.
ಅಸಮತೋಲನಕ್ಕೆ ಕಾರಣ?
ಸೂಪರ್-12ರ ಗುಂಪು ರಚನೆಯಲ್ಲಿ ಅಸಮತೋಲನ ಉಂಟಾಗಲು ಪ್ರಮುಖ ಕಾರಣ, ಬಾಂಗ್ಲಾದೇಶ ತಂಡ ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್ ಎದುರು ಆಘಾತ ಎದುರಿಸಿದ್ದು. ಇದರಿಂದಾಗಿ ಬಾಂಗ್ಲಾ ತಂಡ ಮೊದಲ ಸುತ್ತಿನಲ್ಲಿ ಬಿ ಗುಂಪಿನ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಮೂರೂ ಪಂದ್ಯ ಗೆದ್ದ ಸ್ಕಾಟ್ಲೆಂಡ್ ಅಗ್ರಸ್ಥಾನದೊಂದಿಗೆ ಗ್ರೂಪ್-2ರಲ್ಲಿ ಸ್ಥಾನ ಗಳಿಸಿತು. ಬಾಂಗ್ಲಾದೇಶ ಅಗ್ರಸ್ಥಾನಿಯಾಗಿ ಗ್ರೂಪ್-2ರಲ್ಲಿ ಸ್ಥಾನ ಪಡೆದಿದ್ದರೆ ಸೂಪರ್-12ರ ಗುಂಪುಗಳಲ್ಲಿ ಅಸಮತೋಲನ ಉಂಟಾಗುತ್ತಿರಲಿಲ್ಲ.
2ನೇ ಗುಂಪು ನಿಜಕ್ಕೂ ಸುಲಭವೇ?
ಮಾಜಿ ಚಾಂಪಿಯನ್‌ಗಳಾದ ಭಾರತ, ಪಾಕಿಸ್ತಾನ, ಟೆಸ್ಟ್ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಜತೆಗೆ ವಿಶ್ವಕಪ್‌ನಲ್ಲಿ ಈಗಷ್ಟೇ ಹೆಸರು ಮಾಡುತ್ತಿರುವ ಅಫ್ಘಾನಿಸ್ತಾನ ಮತ್ತು ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಮತ್ತು ನಮೀಬಿಯ ತಂಡಗಳು ಸೂಪರ್-12ರ ಎರಡನೇ ಗುಂಪಿನಲ್ಲಿವೆ. ಬಲಿಷ್ಠ ತಂಡಗಳ ಪಾಲಿಗೆ ಮೇಲುನೋಟಕ್ಕೆ ಸುಲಭವಾಗಿ ಕಾಣಿಸುತ್ತಿರುವ ಈ ಗುಂಪು ‘ಗ್ರೂಪ್ ಆಫ್ ಲೈಫ್’ ಎಂದೇ ಗುರುತಿಸಲ್ಪಟ್ಟಿದೆ. ಭಾರತ, ಪಾಕಿಸ್ತಾನ ಅಥವಾ ನ್ಯೂಜಿಲೆಂಡ್ ಈ ಗುಂಪಿನಿಂದ ಸೆಮಿಫೈನಲ್‌ಗೇರಬಹುದಾದ ಫೇವರಿಟ್ ತಂಡಗಳಾಗಿವೆ. ಆದರೆ ಈ ತಂಡಗಳು ಲೀಗ್ ಹಂತದಲ್ಲಿ ಕನಿಷ್ಠ 1ರಲ್ಲಿ ಸೋತರೂ, ನಾಕೌಟ್ ಹಂತಕ್ಕೇರುವಲ್ಲಿ ರನ್‌ರೇಟ್ ಲೆಕ್ಕಾಚಾರ ನಿರ್ಣಾಯಕ ಪಾತ್ರವಹಿಸಲಿದೆ. ಆಗ ದುರ್ಬಲ ತಂಡಗಳ ಎದುರು ಯಾವ ತಂಡ ದೊಡ್ಡ ಅಂತರದಿಂದ ಜಯಿಸಿದೆ ಎಂಬುದು ನಿರ್ಣಾಯಕ ಪಾತ್ರವಹಿಸಲಿದೆ. ಹೀಗಾಗಿ ಗುಂಪಿನ ಬಲಿಷ್ಠ ತಂಡಗಳು ದುರ್ಬಲ ತಂಡಗಳ ವಿರುದ್ಧ ಬೃಹತ್ ಗೆಲುವಿನ ಲೆಕ್ಕಾಚಾರದೊಂದಿಗೆ ಆಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರೂಪ್-2ರಲ್ಲೂ ಬಲಿಷ್ಠ ತಂಡಗಳು ಯಾವುದೇ ಪಂದ್ಯವನ್ನು ಲಘುವಾಗಿ ಪರಿಗಣಿಸಿದರೂ ರನ್‌ರೇಟ್ ಲೆಕ್ಕಾಚಾರ ಕೈಕೊಡುವ ಅಪಾಯ ಇದ್ದೇ ಇದೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಯಾವಾಗಲೂ ಅನಿರೀಕ್ಷಿತ ಫಲಿತಾಂಶಗಳ ಸಾಧ್ಯತೆ ಇದ್ದೇ ಇರುತ್ತದೆ. ಯಾಕೆಂದರೆ ಒಂದು ಓವರ್, ಓರ್ವ ಆಟಗಾರನಿಂದ ಇಡೀ ಪಂದ್ಯದ ಚಿತ್ರಣವೇ ಬದಲಾಗುವಂಥ ಕ್ರಿಕೆಟ್ ಪ್ರಕಾರ ಇದಾಗಿದೆ.