ಕ್ರೀಡೆ

ಫೈನಲ್​ಗೆ ದಾಖಲೆ ಪ್ರೇಕ್ಷಕರ ನಿರೀಕ್ಷೆ ಮಹಿಳಾ ಕ್ರೀಡೆಯಲ್ಲಿ ಇತಿಹಾಸ ಬರೆಯುವ ತವಕ

ಮೆಲ್ಬೋರ್ನ್: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಪ್ರೇಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ಆತಿಥೇಯ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ಕ್ರೇಜ್ ಹೊಂದಿರುವ ಭಾರತ ತಂಡಗಳ ನಡುವೆ ಪ್ರಶಸ್ತಿ ಹೋರಾಟ ನಡೆಯಲಿರುವುದರಿಂದ ಒಂದು ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಎಂಸಿಜಿ ಕ್ರೀಡಾಂಗಣ ತುಂಬಿತುಳುಕುವ ನಿರೀಕ್ಷೆ ಹೆಚ್ಚಾಗಿದೆ.

1999ರ ಫಿಫಾ ಮಹಿಳಾ ವಿಶ್ವಕಪ್​ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಮೆರಿಕ-ಚೀನಾ ಪಂದ್ಯವನ್ನು 90,185 ಪ್ರೇಕ್ಷಕರು ವೀಕ್ಷಿಸಿದ್ದು ಮಹಿಳಾ ಕ್ರೀಡೆಯಲ್ಲಿ ಜಾಗತಿಕ ದಾಖಲೆಯಾಗಿದೆ. ಇದು ಮಹಿಳಾ ಪಂದ್ಯವೊಂದನ್ನು ಅತಿಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ದಾಖಲೆಯಾಗಿದ್ದು, ಟಿ20 ವಿಶ್ವಕಪ್ ಫೈನಲ್​ನಲ್ಲಿ 20 ವರ್ಷ ಹಿಂದಿನ ಈ ದಾಖಲೆ ಮುರಿಯುವ ಅವಕಾಶ ಹೆಚ್ಚಿದೆ.

ವಿಶ್ವಕಪ್ ಫೈನಲ್​ಗೆ ಮುನ್ನ ಅಮೆರಿಕದ ಪಾಪ್ ತಾರೆ ಕೇಟ್ ಪೆರ್ರಿ ಅವರ ಕಾರ್ಯಕ್ರಮವೂ ಇರಲಿದೆ. ಮೆಕ್ಸಿಕೋದಲ್ಲಿ 1971ರಲ್ಲಿ ನಡೆದ ಫಿಫಾ ಮಾನ್ಯತೆ ರಹಿತವಾಗಿದ್ದ ಮಹಿಳಾ ಫುಟ್​ಬಾಲ್ ವಿಶ್ವಕಪ್​ನಲ್ಲಿ ಮೆಕ್ಸಿಕೋ-ಡೆನ್ಮಾರ್ಕ್ ಪಂದ್ಯಕ್ಕೆ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸೇರಿದ್ದರು ಎಂದು ಹೇಳಲಾಗುತ್ತಿದ್ದರೂ, ಇದು ಅಧಿಕೃತ ದಾಖಲೆ ಎನಿಸಿಲ್ಲ. ಎಂಸಿಜಿಯಲ್ಲೇ 2015ರಲ್ಲಿ ಪುರುಷರ ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಪಂದ್ಯವನ್ನು 93,013 ಪ್ರೇಕ್ಷಕರು ವೀಕ್ಷಿಸಿದ್ದು ಹಾಲಿ ಐಸಿಸಿ ಟೂರ್ನಿಯ ದಾಖಲೆಯಾಗಿದೆ. -ಏಜೆನ್ಸೀಸ್

ಫಿಲ್ ದಿ ಎಂಸಿಜಿ!

ಭಾರತ-ಆಸೀಸ್ ಫೈನಲ್ ಪಂದ್ಯಕ್ಕೆ ಪ್ರೇಕ್ಷಕರನ್ನು ಸೆಳೆಯಲು ‘ಫಿಲ್ ದಿ ಎಂಸಿಜಿ’ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ. ಪಂದ್ಯದ 50 ಸಾವಿರದಷ್ಟು ಟಿಕೆಟ್​ಗಳು ಕಳೆದ ವಾರವೇ ಮಾರಾಟವಾಗಿದ್ದವು. ಪಂದ್ಯಕ್ಕೆ 48 ಗಂಟೆ ಬಾಕಿ ಇರುವಾಗ 75 ಸಾವಿರದಷ್ಟು ಟಿಕೆಟ್​ಗಳು ಮಾರಾಟವಾಗಿವೆ ಎಂದು ಐಸಿಸಿ ತಿಳಿಸಿದೆ.

ಅದೃಷ್ಟ ಭಾರತದ ಕಡೆಗಿದೆ!

ಟಿ20 ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಭಾರತ ತಂಡದ ನಾಯಕಿ ವೇದಾ ಕೃಷ್ಣಮೂರ್ತಿ, ‘ಅದೃಷ್ಟ ನಮ್ಮ ಕಡೆಗಿದೆ’ ಎಂದಿದ್ದಾರೆ. ‘ನಾನು ಹಣೆಬರಹವನ್ನು ನಂಬುತ್ತೇನೆ. ವಿಶ್ವಕಪ್ ಗೆಲುವಿನ ಅದೃಷ್ಟ ನಮಗಿದೆ. ಹಾಲಿ ವಿಶ್ವಕಪ್​ನಲ್ಲಿ ಎಲ್ಲವೂ ನಮ್ಮ ಪರವಾಗಿದೆ ಎಂದು ಹೇಳಲಾಗುತ್ತಿದೆ.

ಲೀಗ್ ಹಂತದಲ್ಲಿ ಅತ್ಯುತ್ತಮ ಆಟವಾಡಿದ ಕಾರಣ ಫೈನಲ್​ಗೇರುವ ಪ್ರತಿಫಲ ದೊರೆತಿದೆ’ ಎಂದು ವೇದಾ ಹೇಳಿದ್ದಾರೆ. 2017ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಎಡವಿದ ಭಾರತ ತಂಡದ ಬಹುತೇಕ ಆಟಗಾರ್ತಿಯರೇ ಹಾಲಿ ತಂಡದಲ್ಲಿದ್ದು, ಈ ಬಾರಿ ಒತ್ತಡಕ್ಕೆ ಸಿಲುಕದೆ, ಗಮನವಿಟ್ಟು ಆಡಬೇಕಾಗಿದೆ ಎಂದು ವೇದಾ ಹೇಳಿದ್ದಾರೆ.