ಕ್ರೀಡೆ

ತನ್ನ ಊರಿನಲ್ಲಿ ಸ್ವಂತ ಕ್ರಿಕೆಟ್ ಮೈದಾನ ನಿರ್ಮಿಸಿದ ಟೀಮ್ ಇಂಡಿಯಾ ವೇಗಿ!

ಚೆನ್ನೈ: ಕಳೆದ ವರ್ಷ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಪರ ಗಮನಾರ್ಹ ನಿರ್ವಹಣೆ ತೋರಿದ್ದಲ್ಲದೆ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಮೂರೂ ಕ್ರಿಕೆಟ್ ಮಾದರಿಗೆ ಪದಾರ್ಪಣೆ ಮಾಡುವ ಮೂಲಕ ಸುದ್ದಿಯಾಗಿದ್ದ ತಮಿಳುನಾಡಿನ ಎಡಗೈ ವೇಗಿ ಟಿ. ನಟರಾಜನ್ ಇದೀಗ ತಮ್ಮ ಹಳ್ಳಿಯಲ್ಲಿ ಕ್ರಿಕೆಟ್ ಮೈದಾನವೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ತಮ್ಮ ಊರಿನ ಯುವ ಪ್ರತಿಭೆಗಳ ತರಬೇತಿಗೆ ಸೂಕ್ತ ವೇದಿಕೆ ಒದಗಿಸುವುದು ಅವರ ಉದ್ದೇಶವಾಗಿದೆ.

ತಮಿಳುನಾಡಿನ ಚಿನ್ನಪ್ಪಂಪಟ್ಟಿ ಹಳ್ಳಿಯವರಾದ ಟಿ. ನಟರಾಜನ್, ತಮ್ಮದೇ ಹೆಸರಿನಲ್ಲಿ ಕ್ರಿಕೆಟ್ ಮೈದಾನವನ್ನು ನಿರ್ಮಿಸಿದ್ದಾರೆ. ಅದರಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ‘ನನ್ನ ಹಳ್ಳಿಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಕ್ರಿಕೆಟ್ ಮೈದಾನವನ್ನು ನಿರ್ಮಿಸಿರುವುದನ್ನು ಪ್ರಕಟಿಸಲು ಖುಷಿಯಾಗುತ್ತಿದೆ. ನಟರಾಜನ್ ಕ್ರಿಕೆಟ್ ಗ್ರೌಂಡ್ (ಎನ್‌ಸಿಜಿ) ಎಂಬುದಾಗಿ ಇದು ಕರೆಯಲ್ಪಡಲಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡುವ ಮೂಲಕ ನನ್ನ ಕನಸು ನನಸಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ನಾನು ಕ್ರಿಕೆಟ್ ಮೈದಅನವೊಂದನ್ನು ನಿರ್ಮಿಸಿರುವೆ. ದೇವರಿಗೆ ಧನ್ಯವಾದಗಳು’ ಎಂದು 30 ವರ್ಷದ ನಟರಾಜನ್ ಟ್ವೀಟಿಸಿದ್ದಾರೆ.

ಮಾರಕ ಯಾರ್ಕರ್ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವ ಬೌಲರ್ ಎನಿಸಿರುವ ಟಿ. ನಟರಾಜನ್, ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ಹೆಚ್ಚಿನ ಅವಕಾಶಗಳನ್ನು ಪಡೆದಿಲ್ಲ. ಅವರು ಭಾರತ ಪರ ಇದುವರೆಗೆ 1 ಟೆಸ್ಟ್, 2 ಏಕದಿನ ಮತ್ತು 4 ಟಿ20 ಪಂದ್ಯ ಆಡಿದ್ದು, ಒಟ್ಟಾರೆ 13 ವಿಕೆಟ್ ಕಬಳಿಸಿದ್ದಾರೆ.

ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್

ತಂಗರಸು ನಟರಾಜನ್ ಐಪಿಎಲ್ 13ನೇ ಆವೃತ್ತಿಯಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಜಸ್‌ಪ್ರೀತ್ ಬುಮ್ರಾ ಮತ್ತು ವಿದೇಶಿ ವೇಗಿಗಳಿಗಿಂತಲೂ ಹೆಚ್ಚು ಯಾರ್ಕರ್ ಎಸೆತಗಳನ್ನು ಎಸೆಯವ ಮೂಲಕ ಪರಿಣಾಮಕಾರಿ ಬೌಲಿಂಗ್ ನಿರ್ವಹಣೆ ತೋರಿದ್ದರು. ತಮ್ಮ ಹಳ್ಳಿಯಲ್ಲಿ ಟೆನಿಸ್ ಬಾಲ್ ಟೂರ್ನಿಗಳ ಸ್ಟಾರ್ ಆಟಗಾರರೆನಿಸಿದ್ದ ನಟರಾಜನ್ ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಗುರುತಿಸಲ್ಪಟ್ಟಿದ್ದರು. ಇದರಿಂದಾಗಿ 2017ರಲ್ಲಿ ಮೊದಲಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಯ್ಕೆಯಾದರು. 3 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ತಂಡ ಸೇರಿ ಅಚ್ಚರಿ ಸೃಷ್ಟಿಸಿದ್ದ ನಟರಾಜನ್, 6 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೂ ನಿರಾಸೆ ಮೂಡಿಸಿದ್ದರು. 2018ರಲ್ಲಿ ಸನ್‌ರೈಸರ್ಸ್‌ ತಂಡಕ್ಕೆ 40 ಲಕ್ಷ ರೂ. ಮೊತ್ತಕ್ಕೆ ಸೇರ್ಪಡೆಗೊಂಡ ನಟರಾಜನ್, 2 ವರ್ಷಗಳ ಕಾಲ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಆದರೆ ಈ ಬಾರಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಡೆತ್ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರೂ ನಟರಾಜನ್‌ರ ಟೋಯಿ-ಕ್ರಷರ್ಸ್‌ ಯಾರ್ಕರ್ ಎಸೆತಗಳನ್ನು ಎದುರಿಸಲು ಪರದಾಡಿದ್ದರು. ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಕೂಡ ನಟರಾಜನ್ ಬೌಲಿಂಗ್ ಮೆಚ್ಚಿಕೊಂಡಿದ್ದರು. ಐಪಿಎಲ್‌ನಿಂದ ನಟರಾಜನ್‌ರ ವೈಯಕ್ತಿಕ ಜೀವನವೂ ಬದಲಾಗಿದೆ. ದಿನಗೂಲಿ ನೌಕರರಾಗಿದ್ದ ಹೆತ್ತವರಿಗೆ ನಟರಾಜನ್ ಸ್ವಂತ ಮನೆಕಟ್ಟಿಕೊಟ್ಟಿದ್ದರು. ಸಹೋದರಿಯರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇದೀಗ ಸ್ವಂತ ಕ್ರಿಕೆಟ್ ಅಕಾಡೆಮಿ ತೆರೆದು ತಮ್ಮ ಹಳ್ಳಿಯ ಇತರ ಪ್ರತಿಭಾನ್ವಿತ ಆಟಗಾರರಿಗೂ ಕ್ರಿಕೆಟ್ ಕಲಿಯಲು ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದಾರೆ.