ಇಂದೋರ್: ಬೌಲಿಂಗ್ ವಿಭಾಗದ ನೀರಸ ನಿರ್ವಹಣೆಯಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ ತನ್ನ 3ನೇ ಲೀಗ್ ಪಂದ್ಯದಲ್ಲಿ ಸೌರಾಷ್ಟ್ರ ಎದುರು 5 ವಿಕೆಟ್ಗಳಿಂದ ಪರಾಭವಗೊಂಡಿದೆ. ಟೂರ್ನಿಯಲ್ಲಿ ತನ್ನ 2ನೇ ಸೋಲು ಕಂಡ ಕರ್ನಾಟಕ ತಂಡ ಬಿ ಗುಂಪಿನ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದು, ನಾಕೌಟ್ ಪ್ರವೇಶದ ಹಾದಿ ಕಠಿಣಗೊಂಡಿದೆ. ಕರ್ನಾಟಕ ಇನ್ನು ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ನಾಕೌಟ್ ಪ್ರವೇಶಕ್ಕೆ ಇತರ ಪಂದ್ಯಗಳ ಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.
ಹೋಳ್ಕರ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡ, 16 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ ವಿಕೆಟ್ ಕೀಪರ್&ಬ್ಯಾಟರ್ ಕೆಎಲ್ ಶ್ರೀಜಿತ್ (31), ಶ್ರೇಯಸ್ ಗೋಪಾಲ್ (36) ಮತ್ತು ಶುಭಾಂಗ್ ಹೆಗ್ಡೆ (43) ಉಪಯುಕ್ತ ಕೊಡುಗೆಯಿಂದ 8 ವಿಕೆಟ್ಗೆ 171 ರನ್ ಪೇರಿಸಿತು. ಆದರೆ ಹಾರ್ವಿಕ್ ದೇಸಾಯಿ (60) ಅರ್ಧಶತಕ ಬಾರಿಸಿ ಸೌರಾಷ್ಟ್ರಕ್ಕೆ ಆಸರೆಯಾದರು. ಅಂತಿಮವಾಗಿ ಸೌರಾಷ್ಟ್ರ 18.1 ಓವರ್ಗಳಲ್ಲಿ 5 ವಿಕೆಟ್ಗೆ 173 ರನ್ ಪೇರಿಸಿ ಜಯ ದಾಖಲಿಸಿತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ ಹೊರತಾಗಿ ಇತರ ಬೌಲರ್ಗಳೆಲ್ಲ ಪ್ರತಿ ಓವರ್ಗೆ 8ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ಬಿಟ್ಟುಕೊಟ್ಟರು.
ಕರ್ನಾಟಕದ ಅನುಭವಿ ಬ್ಯಾಟರ್ ಹಾಗೂ ಉಪನಾಯಕ ಮನೀಷ್ ಪಾಂಡೆ ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ. ವಿ. ಕೌಶಿಕ್ ಬದಲಿಗೆ ಮನ್ವಂತ್ ಕುಮಾರ್ ಅವಕಾಶ ಪಡೆದರು. ಮನ್ವಂತ್ ಕುಮಾರ್ ಕರ್ನಾಟಕ ಪರ ರಾಷ್ಟ್ರೀಯ ಟಿ20 ಪಂದ್ಯ ಆಡಿದ 71ನೇ ಆಟಗಾರ ಎನಿಸಿದರು. ಶ್ರೇಯಸ್ ಗೋಪಾಲ್ ಕರ್ನಾಟಕ ಪರ ಟಿ20ಯಲ್ಲಿ 50 ವಿಕೆಟ್ ಕಬಳಿಸಿದ 5ನೇ ಬೌಲರ್ ಎನಿಸಿದರು. 39 ಪಂದ್ಯಗಳಲ್ಲೇ ಈ ಸಾಧನೆ ಮಾಡಿ ರಾಜ್ಯದ ಅತಿವೇಗದ ಸಾಧಕ ಎನಿಸಿದರು.
ಕರ್ನಾಟಕ: 8 ವಿಕೆಟ್ಗೆ 171 (ಮಯಾಂಕ್ 4, ಶ್ರೀಜಿತ್ 31, ಸ್ಮರಣ್ 6, ಶ್ರೇಯಸ್ 36, ಅಭಿನವ್ 14, ಶುಭಾಂಗ್ 43, ಭಾಂಡಗೆ 24, ಉನಾದ್ಕತ್ 17ಕ್ಕೆ 2, ಚಿರಾಗ್ ಜಾನಿ 38ಕ್ಕೆ 2, ಪ್ರೇರಕ್ 29ಕ್ಕೆ 2), ಸೌರಾಷ್ಟ್ರ: 18.1 ಓವರ್ಗಳಲ್ಲಿ 5 ವಿಕೆಟ್ಗೆ 173 (ಹಾರ್ವಿಕ್ 60, ಪ್ರೇರಕ್ 25, ವಿಶ್ವರಾಜ್ 18*, ಗೋಹಿತ್ 15*, ವಿದ್ಯಾಧರ್ 39ಕ್ಕೆ 2, ವೈಶಾಕ್ 41ಕ್ಕೆ 1, ಶ್ರೇಯಸ್ 23ಕ್ಕೆ 1). ಪಂದ್ಯಶ್ರೇಷ್ಠ: ಹಾರ್ವಿಕ್ ದೇಸಾಯಿ.
*ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ನವೆಂಬರ್ 29
ಎದುರಾಳಿ: ಸಿಕ್ಕಿಂ
ಆರಂಭ: ಸಂಜೆ 4.30