ಬೆಂಗಳೂರು: ನವೆಂಬರ್ 23ರಂದು ಆರಂಭವಾಗಲಿರುವ 2024-25ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ರಾಜ್ಯದ ಸಂಭಾವ್ಯ26 ಆಟಗಾರರ ಹೆಸರನ್ನು ಕೆಎಸ್‌ಸಿಎ ಸೋಮವಾರ ಪ್ರಕಟಿಸಿದೆ. ಇತ್ತೀಚೆಗೆ ಸಿಕೆ ನಾಯ್ಡು ಟ್ರೋಫಿಯಲ್ಲಿ ಭರ್ಜರಿ ತ್ರಿಶತಕ ಸಿಡಿಸಿದ ಮ್ಯಾಕ್ನೀಲ್ ನೋರೋನ್ಹಾ ಸ್ಥಾನ ಸಂಪಾದಿಸಿದ್ದಾರೆ.
ಹಾಲಿ ರಣಜಿ ಟ್ರೋಫಿ ತಂಡದಲ್ಲಿರುವ ಎಲ್ಲ ಆಟಗಾರರು ಸ್ಥಾನ ಪಡೆದುಕೊಂಡಿದ್ದು, ನವೆಂಬರ್ 22ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ನಡುವೆಯೂ ಬ್ಯಾಟರ್ ಕೆಎಲ್ ರಾಹುಲ್, ವೇಗಿ ಪ್ರಸಿದ್ಧ ಕೃಷ್ಣಗೆ ಸಂಭಾವ್ಯ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಉತ್ತರಾಖಂಡ ಎದುರು ಕರ್ನಾಟಕ ತಂಡ ತನ್ನ ಅಭಿಯಾನ ಆರಂಭಿಸಲಿದೆ.
ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ಮನೀಷ್ ಪಾಂಡೆ, ಚೇತನ್ ಎಲ್‌ಆರ್, ಮ್ಯಾಕ್ನೀಲ್ ನೋರೋನ್ಹಾ, ಶ್ರೇಯಸ್ ಗೋಪಾಲ್, ಕೆಎಲ್ ಶ್ರೀಜಿತ್ (ವಿ.ಕೀ), ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಹಾರ್ದಿಕ್ ರಾಜ್, ಕೌಶಿಕ್ ವಿ., ವಿಧ್ಯಾದರ್ ಪಾಟೀಲ್, ಶುಭಾಂಗ್ ಹೆಗ್ಡೆ, ಅಭಿಲಾಷ್ ಶೆಟ್ಟಿ, ಮೊಹ್ಸಿನ್ ಖಾನ್, ಸ್ಮರಣ್ ಆರ್, ಲವನೀತ್ ಸಿಸೋಡಿಯಾ (ವಿ.ಕೀ), ಶರತ್ ಬಿಆರ್ (ವಿ.ಕೀ), ವೈಶಾಕ್, ಮನ್ವಂತ್ ಕುಮಾರ್ ಎಲ್, ಯಶೋವರ್ಧನ್ ಪರಂತಪ್, ಅಧೋಕ್ಷ ಹೆಗ್ಡೆ, ಪ್ರವೀಣ್ ದುಬೆ, ವೆಂಕಟೇಶ್ ಎಂ.
ಲವನೀತ್ ಬದಲಿಗೆ ಕೆಎಲ್ ಶ್ರೀಜಿತ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೆಂಬರ್ 6ರಿಂದ 9ರವರೆಗೆ ನಿಗದಿಯಾಗಿರುವ ಕರ್ನಾಟಕ-ಬಂಗಾಳ ವಿರುದ್ಧ ಪಂದ್ಯಕ್ಕೆ ರಾಜ್ಯದ ವಿಕೆಟ್ ಕೀಪರ್-ಬ್ಯಾಟರ್ ಲವನೀತ್ ಸಿಸೋಡಿಯಾ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಗೆ ತುತ್ತಾಗಿರುವ ಲವನೀತ್ ಬದಲಿಗೆ 28 ವರ್ಷದ ಕೆಎಲ್ ಶ್ರೀಜಿತ್ ಸ್ಥಾನ ಸಂಪಾದಿಸಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಆಡಿದ 11 ಪಂದ್ಯಗಳಲ್ಲಿ 349 ರನ್ ಕಲೆಹಾಕಿರುವ ಶ್ರೀಜಿತ್ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.