ಬೆಂಗಳೂರು: ಹಾಲಿ ದೇಶೀಯ ಕ್ರಿಕೆಟ್ ಋತುವಿನ ರಣಜಿ ಟ್ರೋಫಿ ಮೊದಲ ಹಂತದ ಮುಕ್ತಾಯದ ಬಳಿಕ ಸೀಮಿತ ಓವರ್ ಕ್ರಿಕೆಟ್ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ಶನಿವಾರ ಚಾಲನೆ ದೊರೆತಿದೆ. ಸಾಂಪ್ರದಾಯಿಕವಾಗಿ ಯುವ ತಾರೆಯರಿಗೆ ಚಿಮ್ಮುಹಲಗೆಯಾಗಿರುವ ಟೂರ್ನಿಯ ಹಾಲಿ ಆವೃತ್ತಿಯೂ, 2027ರ ಐಪಿಎಲ್ ಮಿನಿ ಹರಾಜಿಗೆ ಮುನ್ನ ನಿಗದಿಯಾಗಿರುವುದರಿಂದ ಮಹತ್ವ ಪಡೆದುಕೊಂಡಿದೆ. ಜಾರ್ಖಂಡ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.
ಐಪಿಎಲ್ ಮಿನಿ ಹರಾಜಿಗೆ ಇನ್ನು ಒಂದು ತಿಂಗಳು ಬಾಕಿಯಿರುವಾಗ ಫ್ರಾಂಚೈಸಿಗಳ ಪತ್ರಿಭಾಶೋಧ ತಂಡಗಳು ಯುವ ಆಟಗಾರರ ಪ್ರದರ್ಶನ ಮೇಲೆ ಚಿತ್ತಹರಿಸಲಿದ್ದಾರೆ.ಫ್ರಾಂಚೈಸಿಗಳ ಗಮನಸೆಳೆಯಲು ಆಟಗಾರರಿಗೆ ಟೂರ್ನಿ ಆಯ್ಕೆ ಟ್ರಯಲ್ಸ್ ಸಹ ಇದಾಗಿರಲಿದೆ.
ಎಲೀಟ್ ಗುಂಪುಗಳು
ಎ: ಕರ್ನಾಟಕ, ಬರೋಡ, ಬಂಗಾಳ, ಚಂಡೀಗಢ, ಜಾರ್ಖಂಡ್, ಮಿಜೋರಾಂ, ರಾಜಸ್ಥಾನ, ಉತ್ತರ ಪ್ರದೇಶ. ಸ್ಥಳ: ಮುಂಬೈ.
ಬಿ: ಬಿಹಾರ, ದೆಹಲಿ, ಹರಿಯಾಣ, ಜಮ್ಮು-ಕಾಶ್ಮೀರ, ಪಂಜಾಬ್, ರೈಲ್ವೇಸ್, ಸೌರಾಷ್ಟ್ರ, ತಮಿಳುನಾಡು. ಸ್ಥಳ: ಇಂದೋರ್.
ಸಿ: ಆಂಧ್ರ, ಅಸ್ಸಾಂ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ತ್ರಿಪುರ. ಸ್ಥಳ: ಮೊಹಾಲಿ.
ಡಿ: ಛತ್ತೀಸ್ಗಢ, ಗೋವಾ, ಗುಜರಾತ್, ಹೈದರಾಬಾದ್, ಮುಂಬೈ, ಒಡಿಶಾ, ಉತ್ತರಾಖಂಡ, ವಿದರ್ಭ. ಸ್ಥಳ: ಕೋಲ್ಕತ.
ಪ್ಲೇಟ್ ಗುಂಪು: ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಸರ್ವೀಸಸ್, ಸಿಕ್ಕಿಂ. ಸ್ಥಳ: ಸೋವಿಮಾ (ನಾಗಾಲ್ಯಾಂಡ್).
ಟೂರ್ನಿ ಸ್ವರೂಪ
ಎಲೀಟ್ ವಿಭಾಗದ 4 ಗುಂಪಿನಲ್ಲಿ ತಲಾ 8 ತಂಡಗಳು ಸ್ಥಾನ ಪಡೆದಿವೆ. ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ ಲೀಗ್ ಹಂತಕ್ಕೇರಲಿವೆ. ಸೂಪರ್ ಲೀಗ್ನಲ್ಲಿ ಎ ಮತ್ತು ಬಿ ಗುಂಪಿನಲ್ಲಿ ತಲಾ 4 ತಂಡಗಳು ರೌಂಡ್ ರಾಬಿನ್ ಪಂದ್ಯ ಆಡಲಿವೆ. ತಲಾ 3 ಪಂದ್ಯಗಳ ಬಳಿಕ ಎ-ಬಿ ಗುಂಪಿನ ಅಗ್ರ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಪ್ಲೇಟ್ ಗುಂಪಿನಲ್ಲಿರುವ 6 ತಂಡಗಳ ರೌಂಡ್ ರಾಬಿನ್ ಲೀಗ್ ಬಳಿಕ ಅಗ್ರ 2 ತಂಡಗಳ ನಡುವೆ ಪ್ಲೇಟ್ ಫೈನಲ್ ನಡೆಯಲಿದೆ. ನ.26ರವರೆಗೆ ಲೀಗ್ ಪಂದ್ಯಗಳು ನಡೆದರೆ, ನ.30ರಿಂದ ಡಿ.4ರವರೆಗೆ ಸೂಪರ್ ಲೀಗ್ ಪಂದ್ಯಗಳು ನಡೆಯಲಿವೆ. ಡಿ.6ಕ್ಕೆ ಫೈನಲ್ ನಿಗದಿಯಾಗಿದೆ.
80: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ವಿಜೇತ ತಂಡ 80 ಲಕ್ಷ ರೂ. ಬಹುಮಾನ ಪಡೆದರೆ, ರನ್ನರ್ಅಪ್ ತಂಡ 40 ಲಕ್ಷ ರೂ. ಗಳಿಸಲಿದೆ.
ಕರ್ನಾಟಕದ ಪಂದ್ಯಗಳು
ದಿನಾಂಕ ಎದುರಾಳಿ ಆರಂಭ
ನ.14 ಬಂಗಾಳ ಸಂ.4.30
ನ.16 ಉತ್ತರ ಪ್ರದೇಶ ಬೆ.11.00
ನ.18 ಮಿಜೋರಾಂ ಸಂ. 4.30
ನ.20 ಜಾರ್ಖಂಡ್ ಬೆ.11.00
ನ.22 ಚಂಡೀಗಢ ಮ.1.30
ನ.24 ರಾಜಸ್ಥಾನ ಮ.1.30
ನ.26 ಬರೋಡ ಬೆ.9.00
ಸ್ಟಾರ್ಗಳ ಆಕರ್ಷಣೆ
ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರು, ಐಪಿಎಲ್ನಲ್ಲಿ ಮಿಂಚಿರುವ ಆಟಗಾರರು ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಶಾರ್ದೂಲ್ ಠಾಕೂರ್, ರ್ಸ್ರಾಜ್ ಖಾನ್ (ಮುಂಬೈ), ಸಂಜು ಸ್ಯಾಮ್ಸನ್ (ಕೇರಳ), ವೈಭವ್ ಸೂರ್ಯವಂಶಿ (ಬಿಹಾರ), ಮೊಹಮದ್ ಶಮಿ (ಬಂಗಾಳ), ಭುವನೇಶ್ವರ್ ಕುಮಾರ್ (ಉತ್ತರ ಪ್ರದೇಶ), ಇಶಾಂತ್ ಶರ್ಮ, ಪ್ರಿಯಾಂಶ್ ಆರ್ಯ (ದೆಹಲಿ), ಪ್ರಭ್ಸಿಮ್ರನ್ ಸಿಂಗ್ (ಪಂಜಾಬ್), ಕೃನಾಲ್ ಪಾಂಡ್ಯ (ಬರೋಡ), ವರುಣ್ ಚಕ್ರವರ್ತಿ, ಟಿ. ನಟರಾಜನ್ (ತಮಿಳುನಾಡು) ಅವರಲ್ಲಿ ಪ್ರಮುಖವಾದವರು.