ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶ್ರೇಯಸ್ ಗೋಪಾಲ್ (47 *ರನ್, 28 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಉತ್ತರ ಪ್ರದೇಶ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಆದರೂ ಹಾಲಿ ಚಾಂಪಿಯನ್ ಕರ್ನಾಟಕ ತಂಡ ನಾಕೌಟ್ ಹಂತಕ್ಕೇರುವ ಸಾಧ್ಯತೆ ಕ್ಷೀಣವಾಗಿದೆ.
ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ನಡೆದ ತನ್ನ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕರಾದ ಅಭಿಷೇಕ್ ಗೋಸ್ವಾಮಿ (47) ಮತ್ತು ಕರಣ್ ಶರ್ಮ (41) ಮೊದಲ ವಿಕೆಟ್‌ಗೆ 69 ರನ್ ಪೇರಿಸಿ ಉತ್ತರ ಪ್ರದೇಶಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಬಳಿಕ ಸ್ಪಿನ್ನರ್‌ಗಳಾದ ಜೆ. ಸುಚಿತ್ (21ಕ್ಕೆ 3) ಮತ್ತು ಪ್ರವೀಣ್ ದುಬೆ (15ಕ್ಕೆ 3) ಬಿಗಿ ದಾಳಿ ಸಂಘಟಿಸಿದರು. ಇದರಿಂದ ಉತ್ತರ ಪ್ರದೇಶ 8 ವಿಕೆಟ್‌ಗೆ 132 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಕರ್ನಾಟಕ ತಂಡವೂ ಅಗ್ರ ಕ್ರಮಾಂಕದ ವೈಫಲ್ಯದಿಂದ ತತ್ತರಿಸಿತ್ತು. 72 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಕಣಕ್ಕಿಳಿದ ಶ್ರೇಯಸ್ ಗೋಪಾಲ್, ಬಿರುಸಿನ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅವರಿಗೆ ಕಳೆದ ಪಂದ್ಯದ ಹೀರೋ ಅನಿರುದ್ಧ ಜೋಶಿ (21) ಕೆಲಕಾಲ ಆಸರೆಯಾದರು. ಕೊನೆಗೆ 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 136 ರನ್ ಗಳಿಸಿ ಕರ್ನಾಟಕ ಗೆಲುವಿನ ದಡ ಸೇರಿತು.
5 ಪಂದ್ಯಗಳಲ್ಲಿ 4 ಜಯ, 1 ಸೋಲಿನಿಂದ 16 ಅಂಕ ಗಳಿಸಿದ ಕರ್ನಾಟಕ (+0.292) ಎ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೂ, ನಾಕೌಟ್ ಹಂತಕ್ಕೇರುವ ಸಾಧ್ಯತೆ ಕಡಿಮೆ ಇದೆ. ಎಲ್ಲ 5 ಪಂದ್ಯ ಗೆದ್ದ ಪಂಜಾಬ್ (20 ಅಂಕ) ಅಗ್ರಸ್ಥಾನಿಯಾಗಿ ನಾಕೌಟ್ ಸ್ಥಾನ ಖಚಿತಪಡಿಸಿಕೊಂಡಿದೆ. 5 ಎಲೈಟ್ ಗುಂಪಿನಲ್ಲಿ 2ನೇ ಸ್ಥಾನ ಪಡೆದ 2 ಅತ್ಯುತ್ತಮ ತಂಡಗಳಿಗಷ್ಟೇ ಕ್ವಾರ್ಟರ್ಫೈನಲ್ಗೇರುವ ಅವಕಾಶವಿದ್ದು, ರನ್‌ರೇಟ್ ಲೆಕ್ಕಾಚಾರದಲ್ಲಿ ಕರ್ನಾಟಕ ತಂಡ ಹಿನ್ನಡೆ ಹೊಂದಿದೆ.
ಉತ್ತರ ಪ್ರದೇಶ: 8 ವಿಕೆಟ್‌ಗೆ 132 (ಅಭಿಷೇಕ್ ಗೋಸ್ವಾಮಿ 47, ಕರಣ್ ಶರ್ಮ 41, ಸುರೇಶ್ ರೈನಾ 4, ಪ್ರಿಯಂ ಗಾರ್ಗ್ 6, ಜೆ. ಸುಚಿತ್ 21ಕ್ಕೆ 3, ಪ್ರವೀಣ್ ದುಬೆ 15ಕ್ಕೆ 3, ವಿ. ಕೌಶಿಕ್ 20ಕ್ಕೆ 1, ಶ್ರೇಯಸ್ 22ಕ್ಕೆ 1), ಕರ್ನಾಟಕ: 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 136 (ಕದಂ 5, ಪಡಿಕಲ್ 34, ಕರುಣ್ ನಾಯರ್ 21, ಅನಿರುದ್ಧ ಜೋಶಿ 21, ಶ್ರೇಯಸ್ ಗೋಪಾಲ್ 47*, ಪ್ರವೀಣ್ ದುಬೆ 6*, ಕರಣ್ ಶರ್ಮ 23ಕ್ಕೆ 2, ಸುರೇಶ್ ರೈನಾ 15ಕ್ಕೆ 1).