ಲಂಡನ್: ಕರೊನಾ ಕಾಲದಲ್ಲಿ ಚೆಂಡಿಗೆ ಎಂಜಲು ಹಚ್ಚಿ ಹೊಳಪು ನೀಡುವುದನ್ನು ನಿಷೇಧಿಸಲಾಗಿದೆ. ಈ ನಡುವೆ ಕ್ರಿಕೆಟಿಗರೊಬ್ಬರು ಚೆಂಡಿಗೆ ಸ್ಯಾನಿಟೈಸರ್ ಹಚ್ಚಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ಟ್ರೇಲಿಯಾ ಮೂಲದ ಇಂಗ್ಲಿಷ್ ಬೌಲರ್ ಮಿಚ್ ಕ್ಲೇಡನ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಸಸೆಕ್ಸ್ ತಂಡದ ಪರ ಆಡುತ್ತಿದ್ದಾಗ ಚೆಂಡಿಗೆ ಸ್ಯಾನಿಟೈಸರ್ ಹಚ್ಚಿದ ಆರೋಪದ ಮೇರೆಗೆ ಅಮಾನತು ಶಿಕ್ಷೆ ಎದುರಿಸಿದ್ದಾರೆ.
37 ವರ್ಷದ ಬಲಗೈ ಮಧ್ಯಮ ವೇಗಿ ಕ್ಲೇಡನ್ ಕಳೆದ ತಿಂಗಳು ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದ ವೇಳೆ ಚೆಂಡಿಗೆ ಸ್ಯಾನಿಟೈಸರ್ ಹಚ್ಚಿದ್ದರು ಎಂದು ಆರೋಪಿಸಲಾಗಿದೆ. ಆ ಪಂದ್ಯದಲ್ಲಿ ಅವರು 3 ವಿಕೆಟ್ ಕಬಳಿಸಿ ಮಿಂಚಿದ್ದರು.
ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ತನಿಖೆ ಪೂರ್ಣಗೊಂಡು ತೀರ್ಪು ಬರುವವರೆಗೆ ಮಿಚ್ ಕ್ಲೇಡನ್ ಅಮಾನತಿನಲ್ಲಿರುತ್ತಾರೆ ಎಂದಿದೆ. ಇದರಿಂದಾಗಿ ಅರು ಬಾಬ್ ವಿಲ್ಲಿಸ್ ಟ್ರೋಫಿಯಲ್ಲಿ ಸಸೆಕ್ಸ್ ತಂಡ ಸರ‌್ರೆ ವಿರುದ್ಧ ಆಡಲಿರುವ ಮುಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ: ಅರ್ಜೆಂಟೀನಾ ಕ್ರಿಕೆಟ್ ತಂಡದ ನಾಯಕಿ ಈಗ ಕರೊನಾ ವಾರಿಯರ್!
ಕ್ರಿಕೆಟ್‌ನಲ್ಲಿ ಬೌಲರ್‌ಗಳು ಸ್ವಿಂಗ್ ಸಾಧಿಸಲು ಚೆಂಡಿಗೆ ಎಂಜಲು ಹಚ್ಚಿ ಹೊಳಪು ನೀಡುವುದು ಅಗತ್ಯ. ಆದರೆ ಎಂಜಲಿನಿಂದ ಸೋಂಕು ಹರಡುವ ಭೀತಿಯಿಂದಾಗಿ ಐಸಿಸಿ ಈಗಾಗಲೆ, ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದ್ದರೂ, ಬೆವರು ಹಚ್ಚಲು ಅವಕಾಶ ಕಲ್ಪಿಸಿದೆ. ಇದಕ್ಕೆ ಚೆಂಡಿಗೆ ಕೃತಕ ವಸ್ತುಗಳನ್ನು ಹಚ್ಚುವುದಕ್ಕೂ ಅವಕಾಶವಿಲ್ಲ. ಈ ರೀತಿ ಕೃತಕ ವಸ್ತು ಬಳಸಿದರೆ ಅದು ಚೆಂಡು ವಿರೂಪಕ್ಕೆ ಸಮನಾಗುತ್ತದೆ.