ಕ್ರೀಡೆ

ಮುಂಬೈ ಇಂಡಿಯನ್ಸ್ ಎದುರು ಲಖನೌಗೆ ರೋಚಕ ಗೆಲುವು: ಸೋತರೂ ವಿಶೇಷ ಸಾಧನೆ ಮಾಡಿದ ಹಾರ್ದಿಕ್

ಲಖನೌ: ಮಿಚೆಲ್ ಮಾರ್ಷ್ (60 ರನ್, 31 ಎಸೆತ, 9 ಬೌಂಡರಿ, 2 ಸಿಕ್ಸರ್) ಅಬ್ಬರದ ಆರಂಭ ಹಾಗೂ ಏಡೆನ್ ಮಾರ್ಕ್ರಮ್ (53 ರನ್, 38 ಎಸೆತ, 2 ಬೌಂಡರಿ, 4 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಎದುರು ರನ್‌ಮಳೆ ಹರಿಸಿ 12 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ರಿಷಭ್ ಪಂತ್ ಪಡೆ ತವರಿನಲ್ಲಿ ಮೊದಲ ಯಶಸ್ಸು ಕಂಡಿತು.

ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಲಖನೌಗೆ ಮಿಚೆಲ್ ಮಾರ್ಷ್ ಬಿರುಸಿನ ಆರಂಭ ಒದಗಿಸಿದರು. ನಾಯಕ ಹಾರ್ದಿಕ್ ಪಾಂಡ್ಯ (36ಕ್ಕೆ 5) ಬಿಗಿ ದಾಳಿಯ ನಡುವೆಯೂ ಮಾರ್ಕ್ರಮ್-ಆಯುಷ್ ಬಡೋನಿ (30) ಜತೆಯಾಟದ ಬಲದಿಂದ ಅಂತಿಮವಾಗಿ 8 ವಿಕೆಟ್‌ಗೆ 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಸೂರ್ಯಕುಮಾರ್ ಯಾದವ್ (67 ರನ್, 43 ಎಸೆತ, 9 ಬೌಂಡರಿ, 1ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ ಮುಂಬೈ 5 ವಿಕೆಟ್‌ಗೆ 191 ರನ್‌ಗಳಿಸಲಷ್ಟೇ ಶಕ್ತಗೊಂಡಿತು.

1. ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಇತಿಹಾಸದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಾಯಕ ಎನಿಸಿದರು. ಅನಿಲ್ ಕುಂಬ್ಳೆ 16ಕ್ಕೆ 4 ವಿಕೆಟ್ ಪಡೆದಿದ್ದು, ನಾಯಕನೊಬ್ಬನ ಈ ಹಿಂದಿನ ಅತ್ಯುತ್ತಮ ನಿರ್ವಹಣೆ.

ಸೂರ್ಯಕುಮಾರ್ ಆಟ ವ್ಯರ್ಥ: ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ಮುಂಬೈಗೆ ವೇಗಿ ಆಕಾಶ್ ದೀಪ್ ಶಾಕ್ ನೀಡಿದರು. 2ನೇ ಓವರ್‌ನಲ್ಲಿ ವಿಲ್ ಜಾಕ್ಸ್ (5) ನಿರ್ಗಮಿಸಿದರೆ, ಶಾರ್ದೂಲ್ ಎಸೆದ ಮರು ಓವರ್‌ನಲ್ಲಿ ರ‌್ಯಾನ್ ರಿಕೆಲ್‌ಟನ್ (10) ಡಗೌಟ್ ಸೇರಿದರು. ಆಗ ಬಡ್ತಿ ಪಡೆದ ನಮನ್‌ಧೀರ್ (46) ಬಿರುಸಿನ ಬ್ಯಾಟಿಂಗ್‌ನೊಂದಿಗೆ ಚೇಸಿಂಗ್‌ಗೆ ಬಲ ತುಂಬಿದರೆ, ಇವರಿಗೆ ಸೂರ್ಯಕುಮಾರ್ ಬೆಂಬಲ ನೀಡಿದರು. ನಮನ್‌ಧೀರ್-ಸೂರ್ಯ 3ನೇ ವಿಕೆಟ್‌ಗೆ 35 ಎಸೆತಗಳಲ್ಲಿ 69 ರನ್ ಕಸಿದರು.

ನಮನ್ ಧೀರ್ ಔಟಾದ ಬಳಿಕ ಬಿರುಸಿನಾಟಕ್ಕಿಳಿದ ಸೂರ್ಯ 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇಂಪ್ಯಾಕ್ಟ್ ಪ್ಲೇಯರ್ ತಿಲಕ್ ವರ್ಮ (25) ಹಾಗೂ ಸೂರ್ಯ 4ನೇ ವಿಕೆಟ್‌ಗೆ 48 ಎಸೆತಗಳಲ್ಲಿ 66 ರನ್ ಕಸಿದು ಚೇಸಿಂಗ್ ಜೀವಂತವಿರಿಸಿದರು. 17ನೇ ಓವರ್‌ನಲ್ಲಿ ಸೂರ್ಯ ವಿಕೆಟ್ ಪಡೆದ ಆವೇಶ್ ಪಂದ್ಯಕ್ಕೆ ತಿರುವು ನೀಡಿದರು. ಆದರೆ ತಿಲಕ್ ವರ್ಮ ರನ್‌ಗಳಿಸಲು ಪರದಾಡಿದ್ದು ಮುಂಬೈಗೆ ತೀವ್ರ ಹಿನ್ನಡೆ ತಂದಿತು. ಆವೇಶ್ ಖಾನ್ ಎಸೆದ ಕೊನೇ ಓವರ್‌ನಲ್ಲಿ 22 ರನ್ ಬೇಕಿದ್ದಾಗ ಹಾರ್ದಿಕ್ ಪಾಂಡ್ಯ (28*) ಹೋರಾಟ ಸೋಲಿನ ಅಂತರ ತಗ್ಗಿಸಿತು.