ನವದೆಹಲಿ: ಟೀಮ್ ಇಂಡಿಯಾದಲ್ಲಿ ಮಿಸ್ಟರ್ 360 ಎಂದೇ ಖ್ಯಾತಿ ಗಳಿಸಿರುವ ಸೂರ್ಯಕುಮಾರ್ ಯಾದವ್, ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಒಂದೇ ಒಂದು ಅದ್ಭುತ ಕ್ಯಾಚ್‌ನೊಂದಿಗೆ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ದಕ್ಷಿಣ ಆಫ್ರಿಕಾದ ಪಿಂಚ್ ಹಿಟ್ಟರ್ ಡೇವಿಡ್ ಮಿಲ್ಲರ್ ಅವರು ಬಲವಾಗಿ ಬಾರಿಸಿದ ಚೆಂಡು ಸಿಕ್ಸರ್ನತ್ತ ಸಾಗುತ್ತಿರುವಾಗ ಪವಾಡ ರೀತಿಯಲ್ಲಿ ಸೂರ್ಯ ಕ್ಯಾಚ್ ಹಿಡಿದರು. ಒಂದು ವೇಳೆ ಅದು ಸಿಕ್ಸರ್ ಆಗಿದ್ದರೆ ಆ ಪಂದ್ಯವನ್ನು ಆಫ್ರಿಕಾ ಗೆದ್ದು, ಟ್ರೋಫಿಯನ್ನೂ ಎತ್ತಿಹಿಡಿಯುತ್ತಿತ್ತು.
ಇನ್ನು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿದ್ದ ಈ ಕ್ಯಾಚ್ ಮೇಲೆ ಹಲವು ವಿವಾದಗಳು ಎದ್ದಿದ್ದವು. ಸೂರ್ಯ ಹಿಡಿದ ಕ್ಯಾಚ್ ಅಸಮರ್ಪಕ ಎಂದು ಕೆಲವರು ಟೀಕಿಸಿದರು. ಅವರು ಬೌಂಡರಿ ಹಗ್ಗವನ್ನು ಮುಟ್ಟಿದರು ಎಂದು ವಾದಿಸಿದರು. ಇನ್ನು ಕೆಲವರು ಪಂದ್ಯದ ವೇಳೆಯಲ್ಲಿ ಸೂರ್ಯ ಹಿಡಿದ ಕ್ಯಾಚ್ ಅನ್ನು ಅಂಪೈರ್‌ಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕಿತ್ತು ಮತ್ತು ಹೆಚ್ಚು ಸಮಯ ತೆಗೆದುಕೊಳ್ಳದೆ ತಕ್ಷಣ ನಿರ್ಧಾರ ಪ್ರಕಟಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು. ಟೀಮ್ ಇಂಡಿಯಾ ಮೋಸ ಮಾಡಿ ಗೆದ್ದಿದೆ ಎಂಬ ಆರೋಪವೂ ಕೇಳಿಬಂತು.
ಆದರೆ ಕ್ಯಾಚ್ ಸರಿಯಾಗಿದೆ ಎಂದು ತೋರಿಸುವ ಹೆಚ್ಚಿನ ವಿಡಿಯೋಗಳು ಹೊರಬಂದವು. ಇದು ಕ್ಲೀನ್ ಕ್ಯಾಚ್ ಎಂದು ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಹೇಳಿದ್ದು, ವಿಡಿಯೋಗಳಲ್ಲಿಯೂ ಅದು ಬಹಿರಂಗಗೊಂಡಿದ್ದರಿಂದ ವಿವಾದ ಅಲ್ಲಿಗೆ ಇತ್ಯರ್ಥವಾಯಿತು. ಒಂದೇ ಒಂದು ಕ್ಯಾಚ್ ಮೂಲಕ ಟೀಮ್ ಇಂಡಿಯಾದ ಹೀರೋ ಎನಿಸಿಕೊಂಡ ಸೂರ್ಯಕುಮಾರ್ ಅವರನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಅವರು ಹಿಡಿದದ್ದು ಕ್ಯಾಚ್ ಅಲ್ಲ, ವಿಶ್ವಕಪ್ ಟ್ರೋಫಿ. ಈ ಕ್ಯಾಚ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಹೊಗಳುತ್ತಿದ್ದಾರೆ. ಇದೀಗ ಈ ಕ್ಯಾಚ್ ಬಗ್ಗೆ ಸೂರ್ಯ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದು, ಇದನ್ನು ಮೀರಿ ಒಂದು ಕ್ಯಾಚ್ ಇದೆ ಎಂದಿದ್ದಾರೆ.
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಹಿಡಿದ ಕ್ಯಾಚ್ಗಿಂತ ಪತ್ನಿ ದೇವಿಶಾ ಶೆಟ್ಟಿಯನ್ನು ಮದುವೆಯಾಗಿದ್ದು ನನ್ನ ಜೀವನದಲ್ಲಿ ಬಹಳ ಮುಖ್ಯವಾದ ಕ್ಯಾಚ್ ಎಂದು ಸೂರ್ಯಕುಮಾರ್ ಬಹಿರಂಗಪಡಿಸಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಮಿಲ್ಲರ್ ನೀಡಿದ ಕ್ಯಾಚ್ ಪಡೆದು 8 ದಿನಗಳಾಗಿವೆ. ಆದರೆ, ತಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಕ್ಯಾಚ್ ತೆಗೆದುಕೊಂಡು 8 ವರ್ಷಗಳಾಗಿವೆ ಎಂದು ತನ್ನ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸೂರ್ಯಕುಮಾರ್, ಪತ್ನಿ ದೇವಿಶಾ ಜೊತೆಗಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಸೂರ್ಯ-ದೇವಿಶಾ ಮದುವೆಯಾಗಿ ಎಂಟು ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ದಂಪತಿ ದೊಡ್ಡ ಕೇಕ್ ಕತ್ತರಿಸಿ ತಮ್ಮ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸುಂದರ ಜೋಡಿಗೆ ಮದುವೆಯ ದಿನದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ನಿಮ್ಮ ಜೋಡಿ ನೂರ್ಕಾಲ ಸುಖವಾಗಿರಲಿ ಎಂದು ಹಾರೈಸುತ್ತಿದ್ದಾರೆ. (ಏಜೆನ್ಸೀಸ್)