ನವದೆಹಲಿ: ಇತ್ತೀಚೆಗೆ ಆಸೀಸ್ ಮತ್ತು ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ತಂಡದ ಹಂಗಾಮಿ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಜನವರಿ 11ರಿಂದ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕೊನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಪಾದದ ಗಾಯಕ್ಕೊಳಗಾಗಿರುವ ಸೂರ್ಯಕುಮಾರ್ ಚೇತರಿಕೆಗೆ 6 ವಾರ ಬೇಕಾಗಿದೆ. ಹೀಗಾಗಿ ಅವರು ಫೆಬ್ರವರಿವರೆಗೆ ಫಿಟ್ ಆಗುವುದಿಲ್ಲ. ಐಪಿಎಲ್ಗೆ ಮುನ್ನ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಸೂರ್ಯ ಮರಳಿ ಕಣಕ್ಕಿಳಿಯಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸೂರ್ಯ ಜತೆಗೆ ಹಾರ್ದಿಕ್ ಪಾಂಡ್ಯ ಕೂಡ ಆಫ್ಘನ್ ಸರಣಿಗೆ ಅಲಭ್ಯರಾಗಿರುವುದರಿಂದ ಬಿಸಿಸಿಐ, ರೋಹಿತ್ಗೆ ಟಿ20ಯಲ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಕೇಳಿಕೊಳ್ಳಬಹುದು ಅಥವಾ ರವೀಂದ್ರ ಜಡೇಜಾರನ್ನು ಹಂಗಾಮಿ ನಾಯಕರಾಗಿ ಆರಿಸಬಹುದು ಎನ್ನಲಾಗಿದೆ. ಆದರೆ ಜಡೇಜಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಆಡಬೇಕಾಗಿರುವುದರಿಂದ ಅವರ ಕಾರ್ಯದೊತ್ತಡ ತಗ್ಗಿಸಬೇಕಾಗುತ್ತದೆ.
ಇನ್ನು ಏಷ್ಯಾಡ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಋತುರಾಜ್ ಗಾಯಕ್ವಾಡ್ ಕೂಡ ದಣ ಆಫ್ರಿಕಾದಲ್ಲಿ ಕೈಬೆರಳು ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಆಫ್ಘನ್ ವಿರುದ್ಧ ಟಿ20 ಸರಣಿಯಲ್ಲಿ ಯಾರು ನಾಯಕರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.