ಬೆಂಗಳೂರು: ಕ್ರಿಕೆಟ್ ತಾರೆಯರ ಚಿತ್ರಗಳನ್ನು ಫೇಸ್ ಆ್ಯಪ್ ಮೂಲಕ ಹೆಣ್ಣಾಗಿ ಪರಿವರ್ತಿಸುವುದು ಹೊಸ ಟ್ರೆಂಡ್ ಆಗಿದೆ. ಈಗಾಗಲೆ ಟೀಮ್ ಇಂಡಿಯಾದ ಹಾಲಿ ಕ್ರಿಕೆಟಿಗರು ಮತ್ತು ಕೆಲವು ಹಿರಿಯ ಮಾಜಿ ಕ್ರಿಕೆಟಿಗರ ಚಿತ್ರಗಳನ್ನು ಹೆಣ್ಣಾಗಿ ಪರಿವರ್ತಿಸಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಗುರುವಾರ ಈ ಟ್ರೆಂಡಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ಸೇರ್ಪಡೆಗೊಂಡಿದ್ದು, ತನ್ನ ಆಟಗಾರರು ಮತ್ತು ಸಿಬ್ಬಂದಿ ವರ್ಗದವರ ಚಿತ್ರಗಳನ್ನು ಹೆಣ್ಣಾಗಿ ಪರಿವರ್ತಿಸಿ ಅದನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿದೆ. ಈ ಪೈಕಿ ಸಿಎಸ್‌ಕೆ ವೇಗಿ ಶಾರ್ದೂಲ್ ಠಾಕೂರ್ ಅವರ ಹೆಣ್ಣಿನ ಚಿತ್ರಕ್ಕೆ ಹಿರಿಯ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮನಸೋತಿದ್ದಾರೆ.
ಇದನ್ನೂ ಓದಿ: ಭಾರತದ ಟೆಸ್ಟ್ ಕ್ರಿಕೆಟ್ ಪದಾರ್ಪಣೆಗೆ 88 ವರ್ಷ
ಶಾರ್ದೂಲ್ ಠಾಕೂರ್ ನಿಜಕ್ಕೂ ಹೆಣ್ಣಾಗಿದ್ದರೆ ಅವರ ಜತೆಗೆ ಕಾಫಿ ಡೇಟ್ ಹೋಗುತ್ತಿದ್ದೆ ಎಂದು ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ‘ಹಹಹ, ನಾನು ಮತ್ತು ಶಾರ್ದೂಲ್ ಶೀಘ್ರದಲ್ಲೇ ಕಾಫಿಗೆ ಹೋಗಲಿದ್ದೇವೆ’ ಎಂದು ರೈನಾ, ಚೆನ್ನೈ ಸೂಪರ್ ಕಿಂಗ್ಸ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಮೆಂಟ್ ಹಾಕಿದ್ದಾರೆ. ರೈನಾರ ಈ ಪ್ರತಿಕ್ರಿಯೆಗೆ ಪ್ರತಿಯಾಗಿ ಸಿಎಸ್‌ಕೆ, ರೈನಾರ ಪತ್ನಿ ಪ್ರಿಯಾಂಕಾ ಚೌಧರಿ ಅವರನ್ನು ಟ್ಯಾಗ್ ಮಾಡಿ ಕಾಲೆಳೆದಿದೆ. ಪತ್ನಿಯೂ ಖಂಡಿತಾ ಅಲ್ಲಿರುತ್ತಾಳೆ ಎಂದು ರೈನಾ ಮತ್ತೆ ಪ್ರತಿಕ್ರಿಯಿಸಿದ್ದಾರೆ.
ತಂಡದ ಮತ್ತೋರ್ವ ವೇಗಿ ದೀಪಕ್ ಚಹರ್ ಅವರ ಸೌಂದರ್ಯಕ್ಕೆ ಅವರ ಅಕ್ಕ ಮಾಲತಿ ಚಹರ್ ಮನಸೋತಿದ್ದು, ‘ದೀಪಕ್ ಚಹರ್ ಅವರದ್ದು ಮುಗ್ಧ ಮುಖ, ತುಂಟ ಕಣ್ಣು ಮತ್ತು ಬೋಲ್ಡ್ ತುಟಿಗಳ ಡೆಡ್ಲಿ ಕಾಂಬಿನೇಷನ್’ ಎಂದು ಬರೆದಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟಿಗರು ಹೆಣ್ಣಾಗಿರುವ ಚಿತ್ರಗಳು ಇತ್ತೀಚೆಗೆ ವೈರಲ್ ಆಗಿದ್ದಾಗ ಸ್ಪಿನ್ನರ್ ಯಜುವೇಂದ್ರ ಚಾಹಲ್, ರೋಹಿತ್ ಶರ್ಮರ ಚಿತ್ರವನ್ನು ಟ್ವೀಟಿಸಿದ್ದರು ಮತ್ತು ‘ರೋಹಿತಾ ಶರ್ಮ’ ಎಂದು ಕಾಲೆಳೆದಿದ್ದರು.